ಕನ್ನಡ ಚಿತ್ರರಂಗದಲ್ಲಿ ಶ್ರಾವಣ ಕಂಡು ಅದೆಷ್ಟೋ ದಿನ ಆದವು. ಬೆರಳೆಣಿಕೆಯಷ್ಟು ಚಿತ್ರ ಮಾತ್ರ ಗೆದ್ದಿದ್ದು, ಕನ್ನಡ ಚಲನಚಿತ್ರ ಮಂಡಳಿ ನಷ್ಟದ ದಿನ ಎಣಿಸುತ್ತಿದೆ. ಈ ಸಂದರ್ಭದಲ್ಲಿ ಶ್ರಾವಣ ನೆನೆಸಿಕೊಳ್ಳಲು ಸಾಧ್ಯವೇ?
ಕನ್ನಡ ಚಿತ್ರರಂಗಕ್ಕೆ ಶ್ರಾವಣ ಬರುತ್ತೋ ಇಲ್ಲವೋ, ಆದರೆ ಈ ನಡುವೆ ಹೊಸಬರ ಪ್ರಯತ್ನದಿಂದ ಸಿದ್ಧವಾಗಿರುವ ಶ್ರಾವಣ ಹೆಸರಿನ ಚಿತ್ರ ಮಾತ್ರ ತೆರೆಗೆ ಬರಲು ಸಿದ್ಧವಾಗಿದೆ. ಚಿತ್ರ ಕಥೆ, ಅಭಿನಯ ಎಲ್ಲವೂ ಭಿನ್ನ ಹಾಗೂ ವಿಭಿನ್ನ ಎನ್ನಲಾಗುತ್ತಿದೆ.
ಮೂವರು ನಿರುದ್ಯೋಗಿ ಯುವಕರ ಕಥೆ ಇದು. ಇವರ ಜೀವನದಲ್ಲಿ ನಾಯಕಿಯ ಪ್ರವೇಶ ಆಗುತ್ತದೆ. ಪರಸ್ಪರ ಇವರ ನಡುವಿನ ಸಾಮರಸ್ಯ ಹೇಗೆ ಬೇರಾಗುತ್ತದೆ. ಇವರಲ್ಲಿ ನಾಯಕಿಯನ್ನು ಒಲಿಸಿಕೊಳ್ಳಲು ಸ್ಪರ್ಧೆ ಆರಂಭವಾಗುತ್ತದೆ. ಯಾರು ಗೆಲ್ಲುತ್ತಾರೆ ಎನ್ನುವುದು ಚಿತ್ರ ನೋಡಿ ಅರಿಯಬೇಕು. ಒಂದು ರೀತಿ ಸ್ನೇಹ, ಪ್ರೀತಿ, ಸಾಮರಸ್ಯ, ಆಂತರಿಕ ಕಲಹ ಇನ್ನಿತರ ವಿಷಯವನ್ನು ಚಿತ್ರ ಒಳಗೊಂಡಿದೆ.
ನಾಯಕರಾಗಿ ವಿಜಯ್ ರಾಘವೇಂದ್ರ, ಹೊಸ ಹುಡುಗರಾದ ಸಂದೀಪ್ ಹಾಗೂ ಭುವನ್ ಚಂದ್ರ ಇದ್ದಾರೆ. ಇವರಿಗೆ ಗಾಯಿತ್ರಿ ನಾಯಕಿ. ಇದು ಇವರ ಚೊಚ್ಚಲ ಚಿತ್ರ. ಎಲ್ಲಿಂದಲೋ ಬರುವ ಈಕೆ ಇವರ ಜತೆ ಉಳಿದುಕೊಳ್ಳುತ್ತಾರೆ. ಈ ನಾಲ್ವರ ನಡುವೆ ನಡೆಯುವ ಸನ್ನಿವೇಶವೇ ಚಿತ್ರವಾಗಿ ಮೂಡಿ ಬಂದಿದೆ. ನಟಿಯ ಬದುಕಿನಲ್ಲಿಯೂ ಒಂದು ಕೆಟ್ಟ ಘಟನೆ ಆಗಿರುತ್ತದೆ. ಸಂಕಷ್ಟದಲ್ಲಿ ಇರುತ್ತಾಳೆ. ಅದನ್ನು ನಿವಾರಿಸುವುದು ಸಹ ಚಿತ್ರದ ಪ್ರಮುಖ ಭಾಗದಲ್ಲಿ ಒಂದು.
ರಾಜೇಶೇಖರ್ ನಿರ್ದೇಶಿಸಿದ್ದು, ಆರ್‌ಟಿಒ ಶಿವಣ್ಣ ನಿರ್ಮಾಪಕರು. ತುಮಕೂರು ಸುತ್ತ ಚಿತ್ರೀಕರಣ ನಡೆಯುತ್ತಿದೆ. ಚಿತ್ರ ಸದ್ಯವೇ ತೆರೆಗೆ ಬರುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ.