ಆತ ಹಳ್ಳಿ ಹೈದ. ಊರಲ್ಲೇ ಯಾರೂ ಹೆಣ್ಣು ಕೊಡಲ್ಲ. ಮದುವೆ ಆಸೆ ಒಂದು ಕಡೆ, ಹುಡುಗಿ ಇಲ್ಲದಿರುವುದು ಇನ್ನೊಂದು ಕಡೆ. ಅನಿರೀಕ್ಷಿತವಾಗಿ ಚೆಂದುಳ್ಳಿ ಚೆಲುವೆ ಅವನ ಮುಂದೆ ಬರುತ್ತಾಳೆ. ಮದುವೆ ಆಗುತ್ತೀಯಾ ಅನ್ನುತ್ತಾನೆ, ಹೂ ಅನ್ನುತ್ತಾಳೆ. ಆನಂತರ ಸಿನಿಮಾ ಶುರುವಾಗುತ್ತದೆ.
ಇದು ನಂಜನಗೂಡು ನಂಜುಂಡನ ಕಥೆ. ನಿಜಕ್ಕೂ ಸಂಪೂರ್ಣ ಹಳ್ಳಿ ಜೀವನದ ಮೇಲೆ ಹೆಣೆದಿರುವ ಈ ಚಿತ್ರದ ಹಾಡು ಮಾತ್ರ ಎಲ್ಲವೂ ಆಧುನಿಕ. ಒಂದಕ್ಕೊಂದು ಸಂಬಂಧ ಇಲ್ಲ ಅನ್ನಿಸಿದರೂ, ಇದೆ ಎನ್ನುವುದು ಚಿತ್ರ ನಿರ್ಮಾಪಕರ ವಾದ. ಇದನ್ನು ಅರಿಯಲಾದರೂ ಜನ ಚಿತ್ರ ಮಂದಿರಕ್ಕೆ ಬರಲಿ ಅನ್ನುವುದು ಅವರ ಅಭಿಪ್ರಾಯ ಇರಬಹುದು.
ಒಟ್ಟಾರೆ ಪ್ರೀತಿಸುವ ಹೆಂಡತಿ, ಅನುಮಾನಿಸುವ ಗಂಡ, ಎದುರಾಗುವ ಆತಂಕ, ಉಂಟಾಗುವ ಸಮಸ್ಯೆ ಇವುಗಳ ಸುತ್ತಲೂ ಕಥೆ ಹೆಣೆಯಲಾಗಿದೆ. ಪ್ರಚಂಡ ರಾವಣ ಚಿತ್ರದ ನಿರ್ದೇಶಕ ಶ್ರೀನಿವಾಸ್ ಪ್ರಸಾದ್ ಇದರ ನಿರ್ದೇಶಕ. ಮಲಯಾಳಿ ಬೆಡಗಿ ಹಂಸಿಣಿ ಚಿತ್ರದ ನಾಯಕಿ. ಪಯಣ ಚಿತ್ರದ ನಂತರ ನಟ ರವಿಶಂಕರ್‌ಗೆ ಇದು ಎರಡನೇ ಚಿತ್ರ.
ಪಯಣದಲ್ಲಿ ಲವರ್ ಬಾಯ್ ಆಗಿದ್ದ ಈತ ಇಲ್ಲಿ ಪಕ್ಕಾ ಹಳ್ಳಿ ಹೈದ. ಚಿತ್ರದಲ್ಲಿ ನಾಲ್ಕಾರು ಹಾಡುಗಳಿದ್ದು, ಎಲ್ಲವೂ ಭಿನ್ನವಾಗಿವೆಯಂತೆ. ಹಂಸಿಣಿ ಪಾಲಿಗೆ ಇದೊಂದು ಉತ್ತಮ ಚಿತ್ರವಂತೆ. ಗೃಹಿಣಿಯಾಗಿ ಹಳ್ಳಿಯಲ್ಲಿ ಬದುಕುವ ನಾನು ತುಂಬಾ ಸೇವಾ ಮನೋಭಾವ ಉಳ್ಳವಳು. ಎಲ್ಲರಿಗೂ ಸಹಾಯ ಮಾಡುವ ಮನಸ್ಸು ನನ್ನದು. ಆದರೆ ಎಲ್ಲಕ್ಕೂ ಅನುಮಾನಿಸುವ ಪತಿ ಎದುರು ಏನನ್ನೂ ಮಾಡಲು ಭಯ ಪಡುವ ಪಾತ್ರ ನನ್ನದು. ತುಂಬಾ ಸಂತೋಷವಾಗಿದೆ. ವಿಭಿನ್ನ ಪಾತ್ರ ನನಗೆ ನೀಡಲಾಗಿದೆ. ಹೆಮ್ಮೆ ಅನ್ನಿಸುತ್ತದೆ ಎನ್ನುತ್ತಾರೆ.
ರಾಮ್ ನಾರಾಯಣ್, ಕವಿರಾಜ್ ಸಾಹಿತ್ಯ ಹಾಗೂ ರವಿಚಂದ್ರ ಅವರ ಸಂಗೀತವಿದೆ. ಒಟ್ಟಾರೆ ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು, ಯಾರ ಯಾರ ಭವಿಷ್ಯ ಏನಾಗುವುದೋ ಕಾದು ನೋಡಬೇಕು.