ಇನ್ನೊಂದು ಆಕ್ಷನ್ ಮೂಲವಾಗಿ ಸಿದ್ಧಗೊಂಡ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಇದರ ನಾಯಕ ಇನ್ಯಾರು ಆಗಿರಲು ಸಾಧ್ಯ ಹೇಳಿ. ಹೌದು, ಇದು ಕಂಠೀರವ ಚಿತ್ರದ ಸುದ್ದಿ. ನಾಯಕ ವಿಜಯ್.
ವಿಜಯ್ ಒಬ್ಬ ನಟ ಅಂತಾನೇ ಅನ್ನಿಸೊಲ್ಲ. ಅಸಲಿ ಫೈಟ್ ಮಾಡ್ತಾ ಇದ್ದಾನೆ ಅನ್ನಿಸುತ್ತೆ. ನಿಜಕ್ಕೂ ನೈಜತೆಗೆ ಅತಿ ಹತ್ತಿರವಾದ ಫೈಟ್ ಅವರದ್ದು. ಇಂಥ ನಾಯಕ ಕನ್ನಡದಲ್ಲಿ ಇರುವುದು ನಮ್ಮ ಸೌಭಾಗ್ಯ. ಬಹು ನಿರೀಕ್ಷೆಯ ತಮ್ಮ ಚಿತ್ರಕ್ಕೆ ಇವರ ಸಾಥ್ ಸಿಕ್ಕಿರುವುದು ಅದೃಷ್ಟ ಅನ್ನುತ್ತಾರೆ ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು.
ಒಬ್ಬ ಸಾಹಸ ನಿರ್ದೇಶಕರಾಗಿ ಇವರು ವಿಜಯ್‌ರಲ್ಲಿರುವ ಪ್ರತಿಭೆಯನ್ನು ಗುರುತಿಸಿದ್ದಾರೆ. ಹೇಗೆ ಬೇಕೋ ಹಾಗೆ ಫೈಟ್ ಮಾಡಿಸಿದ್ದಾರೆ. ಮೊನ್ನೆ ಈ ಚಿತ್ರದ ಕ್ಲೈಮ್ಯಾಕ್ಸ್ ನಗರದಲ್ಲಿ ನಡೆಯಿತು. ಇದರಲ್ಲಿ ವಿಜಯ್ ಹಾಗೂ ಬಾಲಿವುಡ್ ಖಳನಟ ಮುಖೇಶ್ ರಿಷಿ ಭಾಗವಹಿಸಿದ್ದರು. ಥರಹೇವಾರಿ ಫೈಟ್ ದೃಶ್ಯಗಳ ಚಿತ್ರೀಕರಣ ನಡೆಯಿತು.
ನಂತರ ಮಾತನಾಡಿದ ಮುಖೇಶ್ ರಿಷಿ ಇದೊಂದು ಉತ್ತಮ ಕಥೆ ಆಧರಿತ ಚಿತ್ರ. ಜನ ಕೇವಲ ಆಕ್ಷನ್ ಅಥವಾ ಹೊಡೆದಾಟ ಮಾತ್ರ ಇದ್ದರೆ ಒಪ್ಪಿಕೊಳ್ಳುವುದಿಲ್ಲ. ಬದಲಾಗಿ ಕಥೆಯೂ ಇರಬೇಕು. ಅದಿಲ್ಲದೇ ಸುಮ್ಮನೆ ಚಿತ್ರ ಮಂದಿರಕ್ಕೆ ಬಂದು ಮೂರು ಗಂಟೆ ಕೂರುವುದಿಲ್ಲ. ಸಹೃದಯ ವೀಕ್ಷಕರಿಗೆ ಈ ಚಿತ್ರದಲ್ಲಿ ಕಥೆಯೂ ಇದೆ ಎನ್ನುತ್ತಾರೆ.
ಚಿತ್ರದ ಕ್ಲೈಮ್ಯಾಕ್ಸ್ ಏನೋ ಮುಗಿದಿದೆ. ಆದರೆ ವಿದೇಶದಲ್ಲಿ ನಡೆಯಬೇಕಿರುವ ಚಿತ್ರೀಕರಣ ಬಾಕಿ ಇದೆ. ಮುಖೇಶ್ ರಿಷಿಯ ಮಾತು ಅಂತಿಮವಾಗಬೇಕು. ಒಟ್ಟಾರೆ ಎಲ್ಲಾ ಆಗಿ ಚಿತ್ರ ಬಿಡುಗಡೆ ಹಂತಕ್ಕೆ ಬರಲು ಇನ್ನು 4 ತಿಂಗಳಾದರೂ ಬೇಕು. ಚಿತ್ರದಲ್ಲಿ ವಿಜಯ್ ಜೊತೆಗೆ ಶುಭಾ ಪೂಂಜಾ ಹಾಗೂ ರಿಷಿಕಾ (ರಾಜೇಂದ್ರ ಸಿಂಗ್ ಬಾಬು ಅವರ ಪುತ್ರಿ) ಹೊಸ ಹುಡುಗರು, ಸಾಹಸ ನಿರ್ದೇಶಕರು ಬರುತ್ತಿರುವ ಈ ಸಂದರ್ಭದಲ್ಲಿ ಥ್ರಿಲ್ಲರ್‌ಗೂ ಹಾಗೂ ವಿಜಯ್‌ಗೂ ಒಂದು ಬ್ರೇಕ್ ಅಗತ್ಯ ಇದೆ. ಅದನ್ನು ಈ ಚಿತ್ರ ಮಾಡಿಕೊಡಲಿ ಅಂತ ಆಶಿಸೋಣ.