ಕಿರುತೆರೆ ನಟ ಸುಚೇಂದ್ರ ಪ್ರಸಾದ್ ನಿರ್ದೇಶನದಲ್ಲಿ 'ಪ್ರಪಾತ'
ಕನ್ನಡದಲ್ಲಿ ಹೊಸ ಚಿತ್ರ ಸಿದ್ಧವಾಗುತ್ತಿದೆ. ಹೆಸರು ಪ್ರಪಾತ. ಅರೆ, ಮಂಗಳೂರಲ್ಲಿ ವಿಮಾನ ಪ್ರಪಾತಕ್ಕೆ ಬಿದ್ದು ವಾರ ಕಳೆದಿಲ್ಲ. ಅಷ್ಟರಲ್ಲೇ, ಚಿತ್ರ ನಿರ್ಮಿಸಲು ಯಾರೋ ಮುಂದಾಗಿ ಬಿಟ್ಟರಾ ಅಂತ ಯೋಚಿಸುತ್ತಿದ್ದೀರಾ? ಈ ಚಿತ್ರದಲ್ಲಾದರೂ, ಒಂದು ಸುಖಾಂತ್ಯ ಇರಬಹುದೇ ಎಂದು ಚರ್ಚಿಸುವವರಿಗೆ ಉತ್ತರ ಇಲ್ಲಿದೆ.
ನೀವು ಅಂದುಕೊಂಡಿದ್ದ ತಪ್ಪು. ಪ್ರಪಾತ ಅಂದ ಮಾತ್ರಕ್ಕೆ ಇದಕ್ಕೂ ಮಂಗಳೂರು ವಿಮಾನ ದುರಂತಕ್ಕೂ ಸಂಬಂಧವಿಲ್ಲ. ಇದು ಬೇರೆ ಪ್ರಪಾತದ ಸಂಗತಿ. ವಾಯ್ಸಿಂಗ್ ಸೈಲೆನ್ಸ್ ಬ್ಯಾನರ್ ಅಡಿ ಮಾರುತಿ ಎ. ಜಡಿಯವರ್ ಈ ಚಿತ್ರವನ್ನು ಸಿದ್ಧಪಡಿಸಿದ್ದಾರೆ. ಇದುವರೆಗೂ ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಪ್ರಬುದ್ಧ ಪಾತ್ರಗಳನ್ನು ನಿರ್ವಹಿಸುತ್ತಾ ಇದ್ದ ಸುಚೇಂದ್ರ ಪ್ರಸಾದ್ ಈ ಚಿತ್ರದ ನಿರ್ದೇಶಕರು.
ಅಮಾನ್, ಸಂತೋಷ್, ದತ್ತಣ್ಣ, ಶಾಂತಮ್ಮ, ಶಿವರಾಮಣ್ಣ, ಕೆ.ಎಸ್.ಎಲ್. ಸ್ವಾಮಿ, ಸೇತುರಾಂ, ಎಂ.ಪಿ. ವೆಂಕಟರಾವ್, ವಿಕ್ರಂ ಉದಯ್ ಕುಮಾರ್, ಶ್ರೀನಿವಾಸ್ ಪ್ರಭು, ಅಭಿಷೇಕ್ ಮುಂತಾದವರು ಅಭಿನಯಿಸಿದ್ದಾರೆ. ಕೆ. ಶಶಿಧರ್ ಛಾಯಾಗ್ರಹಣವಿದೆ, ಮ್ಯೂಸಿಕ್ ಮಿಂಟ್ ಸಂಗೀತವಿದೆ. ಹೊಸ್ಮನೆ ರಾಮಮೂರ್ತಿ ಅವರ ಕಲೆ, ಲಿಂಗರಾಜು ಸಂಕಲನ ಚಿತ್ರಕ್ಕಿದೆ.
ನಿರ್ದೇಶಕರ ಪ್ರಕಾರ, ಋಷಿಶ್ರೇಷ್ಠ ಭಾರದ್ವಾಜ ಮುನಿ ವಿರಚಿತ 'ವಿಮಾನ ಶಾಸ್ತ್ರ' ಹಲವು ಅಚ್ಚರಿಗಳ ಆಗರ. ಇದರೊಂದಿಗೆ 1896ರಲ್ಲಿಯೇ 'ಮರುತ್ಯಕ್ತಿ' ಹೆಸರಿನ ವಿಮಾನವನ್ನು ಉಡ್ಡಯಿಸಿದ ಆನೆಕಲ್ ಸುಬ್ರಾಯ ಶಾಸ್ತ್ತ್ರಿಗಳ ಸಾಧನೆ ಇನ್ನೊಂದು ಕಡೆ. ಇವರಿಬ್ಬರ ಸಾಧನೆಯೂ ಇತಿಹಾಸ ಓದುವವರಿಗೆ ಸಿಗುತ್ತಿಲ್ಲ ಎನ್ನುವುದು ವಿಪರ್ಯಾಸದ ಸಂಗತಿ. ಇವರ ಬಗ್ಗೆ ಆಸಕ್ತಿ ಹೊಂದುವ ವ್ಯಕ್ತಿಯೊಬ್ಬ ಅವರ ಜಾಡನ್ನು ಅನ್ವೇಷಿಸುತ್ತಾ ಹೊರಡುತ್ತಾನೆ. ಆಗ ಅವನೆದುರು ವಿವಿಧ ಮಗ್ಗುಲುಗಳು ಅನಾವರಣಗೊಳ್ಳುತ್ತವೆ. ಇಲ್ಲಿ ಬರುವ ಎಲ್ಲಾ ಸೋಜಿಗವನ್ನೇ ಒಂದು ಗೂಡಿಸಿ 'ಪ್ರಪಾತ' ಮಾಡಲಾಗಿದೆ. ಇದೊಂದು ನಿಜಕ್ಕೂ ಅನ್ವೇಷಣಾ ಚಿತ್ರ ಅನ್ನಲು ಅಡ್ಡಿ ಇಲ್ಲ' ಅನ್ನುತ್ತಾರೆ.