ಕನ್ನಡದ ಇಬ್ಬರು ಮೇರು ನಟರಾದ ಸುದೀಪ್ ಹಾಗೂ ಅಂಬರೀಶ್ ಅಭಿನಯದ ಮಹತ್ವಾಕಾಂಕ್ಷೆಯ ಚಿತ್ರ 'ವೀರ ಪರಂಪರೆ' ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ.
ಸದ್ಯ ಕೊಳ್ಳೆಗಾಲದಲ್ಲಿ ಶೂಟಿಂಗ್ ನಡೆಯುತ್ತಿದ್ದು, ಮಾತಿನ ಭಾಗ ಹಾಗೂ ಹಾಡೊಂದರ ಚಿತ್ರೀಕರಣ ನಡೆಯುತ್ತಿದೆ. ಗೋಕಾಕ್ ಸಮೀಪ ತಲ್ಲೂರು ಗ್ರಾಮದಲ್ಲಿ 12 ದಿನಗಳ ಶೂಟಿಂಗ್ ಮುಗಿಸಿರುವ ಚಿತ್ರ ತಂಡ ಗುಲ್ಬರ್ಗಾಗೆ ತೆರಳಿ ಅಲ್ಲಿಯೂ ಶೂಟಿಂಗ್ ನಡೆಸಿದೆ. ಅಲ್ಲಿಂದ ನೇರವಾಗಿ ಬೆಂಗಳೂರಿಗೆ ವಾಪಸಾಗಿ ಈಗ ಮೈಸೂರು ಸಮೀಪದ ಕೊಳ್ಳೆಗಾಲದಲ್ಲಿ ತಳ ಊರಿದೆ.
ಎಸ್. ನಾರಾಯಣ್ ನಿರ್ಮಾಣ, ನಿರ್ದೇಶನದ ಈ ಚಿತ್ರದಲ್ಲಿ ಅಂಬರೀಶ್ ಅವರ ಗತ್ತು ಗೈರತ್ತಿನ ಪಾತ್ರ ಮೇಳೈಸಲಿದೆ. ಚಿತ್ರೀಕರಣದಲ್ಲಿ ಸದ್ಯ ಅಂಬಿ, ಸುದೀಪ್, ಐಂದ್ರಿತಾ ರೇ, ಶೋಭರಾಜ್ ಮತ್ತಿತರರು ತೊಡಗಿಕೊಂಡಿದ್ದಾರೆ. ಎಸ್. ನಾರಾಯಣ್‌ರ 17ನೇ ಚಿತ್ರ ಇದಾಗಿದೆ. ಅವರೇ ಈ ಚಿತ್ರಕ್ಕೂ ಕಥೆ, ಚಿತ್ರಕಥೆ, ಸಾಹಿತ್ಯ ಬರೆದಿದ್ದಾರೆ.
ಚಿತ್ರದಲ್ಲಿ ಅಂಬರೀಶ್ ಗ್ರಾಮದ ತಂದೆಯಂತೆ. ಅವರನ್ನು ಕಾಡುವ ದುಷ್ಟಶಕ್ತಿಯಿಂದ ಪಾರು ಮಾಡುವ ಮಗನಾಗಿ ಸುದೀಪ್ ಅಭಿನಯಿಸುತ್ತಿದ್ದಾರೆ. ಇವರಿಗೆ ಜೋಡಿಯಾಗಿ ಐಂದ್ರಿತಾ ರೇ ಹಾಗೂ ಅಂಬಿಗೆ ನಾಯಕಿಯಾಗಿ ವಿಜಯಲಕ್ಷ್ಮಿ ಸಿಂಗ್ ಕಾಣಿಸಿಕೊಳ್ಳುತ್ತಿದ್ದಾರೆ.
ಹಾಸ್ಯ ನಟರಾಗಿ ಶರಣ್ ಇದ್ದಾರೆ. ಆರ್. ಗಿರಿ ಆಕರ್ಷಕ ಛಾಯಾಗ್ರಹಣ ಚಿತ್ರಕ್ಕೆ ಲಭಿಸುತ್ತಿದೆ. ಒಟ್ಟಾರೆ ತಂದೆ ಮಕ್ಕಳ ಪ್ರೇಮ, ಆತ್ಮೀಯತೆ ನಡುವೆ ಸಾಗುವ ಈ ಚಿತ್ರ ಕುಟುಂಬ ವರ್ಗದೊಂದಿಗೆ ಬರುವ ಚಿತ್ರ ಪ್ರೇಮಿಗಳನ್ನುಸೆಳೆಯುವ ಚಿತ್ರವಾಗಿ ರೂಪುಗೊಳ್ಳಲಿದೆ.