ನಾನು ನನ್ನ ಕನಸು ಬಿಡುಗಡೆ ಆಗಿ ಸಾಕಷ್ಟು ಓಡುತ್ತಲೂ ಇದೆ. ಚಿತ್ರದ ನಿರ್ದೇಶಕ ಕಂ ನಟ ಪ್ರಕಾಶ್ ರೈ ಈಗೇನು ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಸಹಜ. ಹೌದು, ಅಸಲಿ ಪ್ರಕಾಶ್ ರೈ ಎಲ್ಲಿದ್ದಾರೆ ಎಂದು ಹುಡುಕಿ ಹೊರಟಾಗ ಕಂಡದ್ದು ದಾವಣಗೆರೆಯಲ್ಲಿ. ಅರೆ, ಅಲ್ಲೇನು ಮಡುತ್ತಿದ್ದಾರೆ? ಹೊಸ ಚಿತ್ರದ ಶೂಟಿಂಗಾ? ಎನ್ನಬೇಡಿ. ಅವರಿನ್ನೂ ನಾನು ನನ್ನ ಕನಸು ಗುಂಗಿನಿಂದ ಆಚೆ ಬಂದಿಲ್ಲ. ಜನ ಸಾಕಷ್ಟು ಸಂಖ್ಯೆಯಲ್ಲಿ ಚಿತ್ರವನ್ನು ನೋಡುತ್ತಿದ್ದಾರೆ, ಇಷ್ಟಪಟ್ಟಿದ್ದಾರೆ ಎನ್ನುವುದು ತಿಳಿದ ನಂತರವೂ ಚಿತ್ರದ ಕ್ಯಾಂಪೇನ್ ಮಾಡುತ್ತಿದ್ದಾರೆ.
ಇವರ ಕನಸಿನ ಅಭಿಯಾನ ಸದ್ಯ ದಾವಣಗೆರೆಯಲ್ಲಿ ನಡೆಯುತ್ತಿದೆ. ಒಂದು ತಂಡ ಕಟ್ಟಿಕೊಂಡು ಊರೂರು ಅಲೆಯುತ್ತಿರುವ ಪ್ರಕಾಶ್ ಇತ್ತೀಚೆಗೆ ದಾವಣಗೆರೆಯಲ್ಲೂ ಕಾಣಿಸಿಕೊಂಡಿದ್ದಾರೆ. ಅಲ್ಲಿ ಮುಕ್ತ ಸಂವಾದ ಏರ್ಪಡಿಸಿ ಸಾರ್ವಜನಿಕರು, ಪತ್ರಕರ್ತರ ಪ್ರಶ್ನೆಗೆ ಮುಕ್ತ ಮುಕ್ತವಾಗಿ ಉತ್ತರ ನೀಡಿದ್ದಾರೆ.
ಇದೊಂದು ಪ್ರಯೋಗಾತ್ಮಕ ಚಿತ್ರ ಅಲ್ಲ. ಕೌಟುಂಬಿಕ ನೋಡುಗರನ್ನು ದೃಷ್ಟಿಯಲ್ಲಿ ಇರಿಸಿಕೊಂಡು ಮಾಡಿದ ಚಿತ್ರ. ಇದಲ್ಲದೇ ಸಿನಿಮಾ ಅಂದಾಕ್ಷಣ ಎಲ್ಲರಿಗೂ ಇಲ್ಲಿ ರಂಜನೆ ಬೇಕು. ಹೀಗಾಗಿ ಹಿಂಸೆ, ಪ್ರೀತಿ, ಪ್ರೇಮ, ಸರಸದ ಜತೆ ಎಲ್ಲಾ ವಯೋಮಾನದ ನಾಗರಿಕರೂ ಬಯಸುವ ಅಂಶಗಳು ಇವೆ. ಇದರಿಂದಲೇ ಚಿತ್ರ ಗೆದ್ದಿದೆ ಎನ್ನುತ್ತಾರೆ ಸಂತಸದಿಂದ.
ಪುರುಷರು ಇನ್ನಷ್ಟು ಮೆಚ್ಯೂರ್ಡ್ ಆಗಬೇಕು. ತಮ್ಮ ಅಗತ್ಯಕ್ಕಿಂತ ಹೆಚ್ಚಿನ ಪೊಸೆಸಿವ್‌ನೆಸ್ ಬಿಡಬೇಕು ಎಂಬುದನ್ನು ಮಗಳ ರೋಲ್ ಮೂಲಕ ಜನರಿಗೆ ಮುಟ್ಟಿಸುವ ಕೆಲಸ ಮಾಡಿದ್ದೇನೆ. ಅಪ್ಪಂದಿರು ಇರಬೇಕಾದ ರೀತಿಯನ್ನು ಇಲ್ಲಿ ತೋರಿಸಿದ್ದೇನೆ. ಇಲ್ಲಿ ಯಾವುದೇ ರಾಗ ದ್ವೇಷಗಳು ಯಾರ ಬಗ್ಗೆಯೂ ಇಲ್ಲ ಅನ್ನುತ್ತಾ ಚಿತ್ರದಲ್ಲಿ ಅಮೂಲ್ಯರ ಪಾತ್ರವನ್ನು ಸಮರ್ಥಿಸಿಕೊಂಡರು.
ನಟನೆ ಟಿವಿ ಅಥವಾ ರಂಗಭೂಮಿಗೆ ಬೇರೆ ಬೇರೆ ರೀತಿ ಇರುವುದಿಲ್ಲ. ಎಲ್ಲಾ ಕಡೆ ಒಂದೇ. ನನ್ನ ನಟನೆಯಲ್ಲಿ ಸಹ ಇದನ್ನೇ ತೋರಿಸಿದ್ದೇನೆ. ಇಂದು ಬೆಳೆದು ನಿಂತ ಹೆಣ್ಣು ಮಕ್ಕಳ ಎದುರು ಪ್ರತಿ ತಂದೆಯೂ ಪೆದ್ದು. ಇದನ್ನೇ ನನ್ನ ಚಿತ್ರದ ಎರಡನೇ ಅರ್ಧದಲ್ಲಿ ತೋರಿಸಿದ್ದೇನೆ. ನೋಡುಗರಿಗೆ ನಾನು ಪೆದ್ದು ಪೆದ್ದು ಅಂತ ಅನ್ನಿಸಬಹುದು. ಆದರೆ ಇಂದು ಬೆಳೆದ ಹೆಣ್ಣುಮಕ್ಕಳಿರುವ ಮನೆಯ ಎಲ್ಲಾ ತಂದೆಯರ ಸ್ಥಿತಿಯೂ ಹಾಗೆಯೇ ಇದೆ ಎಂದರು ಪ್ರಕಾಶ್. ಅಷ್ಟೆಲ್ಲಾ ಮಾತಾಡಿ ಹೆಚ್ಚು ಹೊತ್ತಿ ನಿಲ್ಲಲಿಲ್ಲ. ಮತ್ತೊಂದು ಊರಿಗೆ ತಮ್ಮ ತಂಡದೊಂದಿಗೆ ಕ್ಯಾಂಪೇನಿಗೆ ಹೊರಟರು.