ಶಂಕರ್ ಐಪಿಎಸ್ ಡೈಲಾಗ್ ವಿವಾದದ ಬೆನ್ನಲ್ಲೇ ಇದೀಗ ಮತ್ತೊಂದು ಚಿತ್ರ ಬಿಡುಗಡೆಗೆ ಮೊದಲೇ ಡೈಲಾಗ್ ವಿಷಯದಲ್ಲಿ ವಿವಾದ ಮಾಡಿಕೊಂಡಿದೆ. ಆ ಚಿತ್ರ ಇನ್ಯಾವುದೂ ಅಲ್ಲ, ಶಿವಣ್ಣ, ಪದ್ಮಪ್ರಿಯಾ ಅಭಿನಯದ ಅಗ್ನಿ ಶ್ರೀಧರ್ ಚೊಚ್ಚಲ ನಿರ್ದೇಶನದ ತಮಸ್ಸು.
ಹೇಳಿ ಕೇಳಿ ಹಿಂದೂ ಮುಸ್ಲಿಂ ಕಥಾನಕ ಹೊಂದಿರುವ ಈ ಚಿತ್ರ ನಿನ್ನೆಯಷ್ಟೆ ಸೆನ್ಸಾರಿಗೆ ಹೋಗಿತ್ತು. ಚಿತ್ರ ಹಿಂದೂ ಮುಸ್ಲಿಂ ಕಥಾನಕ ಹೊಂದಿದೆ ಎಂಬ ಕಾರಣಕ್ಕೆ ಕೇಂದ್ರ ಸೆನ್ಸಾರ್ ಮಂಡಳಿಯ ಅಧ್ಯಕ್ಷೆ ಶರ್ಮಿಳಾ ಠಾಗೋರ್ ಪೋಲೀಸ್ ಅಧಿಕಾರಿಯೊಬ್ಬರೂ ಕೂಡಾ ಸೆನ್ಸಾರ್ ಮಾಡುವ ಸಂದರ್ಭ ವೀಕ್ಷಿಸಿ ಅಭಿಪ್ರಾಯ ಹೇಳುವಂತೆ ಕೋರಿದ್ದರು. ಈ ಹಿನ್ನೆಯಲ್ಲಿ ಚಿತ್ರದ ಸಂಭಾಷಣೆಯೊಂದಕ್ಕೆ ಕತ್ತರಿ ಹಾಕುವಂತೆ ಸೆನ್ಸಾರ್ ಅಗ್ನಿ ಶ್ರೀಧರ್‌ಗೆ ಸೂಚಿಸಿದೆ. ಆದರೆ ಅಗ್ನಿ ಶ್ರೀಧರ್ ಮಾತ್ರ ಕತ್ತರಿ ಹಾಕಲು ಯಾವುದೇ ಕಾರಣಕ್ಕೂ ತಯಾರಿಲ್ಲ.
ಬೇಡ ರಾಮ, ಅಲ್ಲಾ ಎನ್ನುವ ದುಷ್ಟ ಶಕ್ತಿಗಳು: ವಿವಾದಕ್ಕೀಡಾದ ಸಂಭಾಷಣೆ ಹೀಗಿದೆ. ನಾಯಕ 'ನಮಗೆ ಬೇಡ ರಾಮ, ಅಲ್ಲಾ ಎನ್ನುವ ದುಷ್ಟ ಶಕ್ತಿಗಳು. ನಿಜವಾದ ರಾಮ, ಅಲ್ಲಾನೇ ನಮಗೆ ಬೇಕು' ಎನ್ನುತ್ತಾನೆ. ಈ ಡೈಲಾಗಿನಲ್ಲಿ ದುಷ್ಟಶಕ್ತಿಗಳು ಎಂಬ ಡೈಲಾಗಿಗೆ ಕತ್ತರಿ ಹಾಕಿ ಎಂದು ಸೆನ್ಸಾರ್ ಮಂಡಳಿ ಹೇಳಿದೆ. ಅಷ್ಟೇ ಅಲ್ಲದೆ, 'ನಾನು ಸಾಬಿ ಅಂದುಕೊಂಡು ಅವನಿಗೆ ಹೊಡೆದೆ' ಎಂಬ ಮಾತಿಗೂ 'ಸಾಬಿ' ಪದಕ್ಕೆ ಕತ್ತರಿ ಹಾಕಿ ಎಂದಿದೆ. ಇದ್ಕಕೆ ಅಗ್ನಿ ರೆಡಿಯಿಲ್ಲ.
ನಾನು ಈ ಚಿತ್ರದಲ್ಲಿ ಹಿಂದು ಮುಸ್ಲಿಂ ಎಂಬ ಧರ್ಮವನ್ನೂ ಮೀರಿದ ಒಂದು ಸಂಬಂಧವಿದೆ ಎಂಬುದನ್ನು ತೋರಿಸಿಕೊಡಲು ಹೊರಟಿದ್ದೇನೆ. ಆದರೆ ಅಂಥದಕ್ಕೇ ಕತ್ತರಿ ಹಾಕಲು ಹೇಳುತ್ತಿದ್ದಾರೆ. ನಾನು ಖಂಡಿತ ರೆಡಿಯಿಲ್ಲ. ಚಿತ್ರವನ್ನು ಬೇಕಾದರೆ ಮುಸ್ಲಿಮರೇ ಹಿಚ್ಚಿರುವ ಶಿವಾಜಿ ನಗರದಲ್ಲೂ ಪ್ರದರ್ಶನಕ್ಕಿಡುತ್ತೇನೆ. ಪ್ರೇಕ್ಷಕರಿಂದ ಯಾವುದೇ ಆಕ್ಷೇಪಗಳು ಬಂದರೂ ಅದನ್ನು ಎದುರಿಸಲು ನಾನು ತಯಾರಿದ್ದೇನೆ ಎನ್ನುತ್ತಾರೆ ಅಗ್ನಿ.
ಸೆನ್ಸಾರ್ ಮಂಡಳಿಯಲ್ಲಿ ಕುಳಿತಿರುವ ಮಂದಿಗೆ ಕಾಮನ್ ಸೆನ್ಸೇ ಇಲ್ಲ. ಅವರೆಲ್ಲಾ ಹೊಸಬರು ಚಿತ್ರ ಇರೋದು ಕೇವಲ ಮನರಂಜನೆಗಾಗಿ ಎಂದೇ ತಿಳಿದಿದ್ದಾರೆ. ಅವರು. ಆದರೆ ಖಂಡಿತ ನಾನು ಮನರಂಜನೆಗಾಗಿ ಚಿತ್ರ ಮಾಡುತ್ತಿಲ್ಲ. ಮನರಂಜನೆಗಾಗಿ ಚಿತ್ರ ಮಾಡೋರು ನಮ್ಮ ಇಂಡಸ್ಟ್ರಿಯಲ್ಲಿ ಬಹಳ ಜನರಿದ್ದಾರೆ. ಆದರೆ ನಾನು ಇಲ್ಲಿರುವ ಕೆಲವು ಕೊರತೆಗಳ ಬಗ್ಗೆ ಜನರ ಕಣ್ಣು ತೆರೆಸಲು ಸಿನಿಮಾ ಮಾಧ್ಯಮ ಬಳಸುತ್ತಿದ್ದೇನೆ ಎಂದರು ಅಗ್ನಿ.
ಸದ್ಯ ಚಿತ್ರಕ್ಕಂತೂ ನಾನು ಕತ್ತರಿ ಹಾಕುತ್ತಿಲ್ಲ. ಚಿತ್ರ ರಿವೈಸಿಂಗ್ ಕಮಿಟಿಗೆ ಹೋಗಲಿ. ಅವರೂ ನೋಡಲಿ. ಇವರಿಗಿಂತ ಅವರಿಗೆ ಹೆಚ್ಚು ತಿಳುವಳಿಕೆ ಇದೆ. ಸಾಕಷ್ಟು ಚಿತ್ರಗಳನ್ನು ನೋಡಿದ ಅನುಭವವಿದೆ. ಆದರೆ ಕತ್ತರಿ ಮಾತ್ರ ಹಾಕಲ್ಲ ಎಂದಿದ್ದಾರೆ ಅಗ್ನಿ. ಚಿತ್ರದಲ್ಲಿ ಶಿವಣ್ಣ ಜೊತೆಗೆ ಮಲಯಾಳಿ ಬೆಡಗಿ ಪದ್ಮಪ್ರಿಯಾ ಹಾಗೂ ಕನ್ನಡತಿ ಹರ್ಷಿಕಾ ಪೂಣಚ್ಚ ಅಭಿನಯಿಸಿದ್ದಾರೆ. ಸದ್ಯ ಚಿತ್ರ ರಿವೈಸಿಂಗ್ ಕಮಿಟಿಗೆ ಹೋಗಲಿದ್ದು, ವಿವಾದ ಇತ್ಯರ್ಥವಾಗಲಿದೆಯೇ ಕಾಯಬೇಕು.