ಅಣಜಿ ನಾಗರಾಜ್ ಕೊನೆಗೂ ಗುಟ್ಟು ಬಿಟ್ಟುಕೊಟ್ಟಿದ್ದಾರೆ. ಇವರ ನಿರ್ಮಾಣದ ಹೊಸ ಚಿತ್ರ ಗುಬ್ಬಿಯ ನಾಯಕ ಯಾರು ಅನ್ನುವುದನ್ನೇ ಅವರು ಬಚ್ಚಿಟ್ಟಿದ್ದರು. ಇದೀಗ ನಾಯಕ ಪತ್ತೆಯಾಗಿದ್ದಾನೆ. ಆತ ಮತ್ಯಾರೂ ಅಲ್ಲ, ನಮ್ಮ ಪಟ್ರೆ ಲವ್ಸ್ ಪದ್ಮ ಚಿತ್ರದ ನಾಯಕ ಅಜಿತ್.
ಇಲ್ಲೊಬ್ಬ ವಿಚಿತ್ರ ಪ್ರೇಮಿಯಾಗಿ ಗಮನ ಸೆಳೆದಿದ್ದ ಈ ಅಜಿತ್ ಈಗ ಅಜಣಿ ನಾಗರಾಜ್ ಕೊಟ್ಟ ಅವಕಾಶದ ಮೂಲಕ ಪೂರ್ಣ ಪ್ರಮಾಣದ ನಾಯಕ. ಇದುವರೆಗೂ ಅರ್ಧಂಬರ್ಧ ಮುಖ ತೋರಿಸಿ ಕುತೂಹಲ ಮೂಡಿಸಿದ್ದ ಅಣಜಿ ಕೊನೆಗೂ ನಾಯಕನ ಮುಖ ದರ್ಶನ ಮಾಡಿಸಿದ್ದಾರೆ.
ಜೋಗಿ ಚಿತ್ರದ ಮೂಲಕ ಅತ್ಯಂತ ಜನಪ್ರಿಯರಾದ ಪ್ರೇಮ್ ಜತೆ ಕೆಲಸ ಮಾಡಿದ ಅನುಭವ ಇರುವ ಇವರು ನಿಜಕ್ಕೂ ಅವರೊಂದಿಗೆ ಕಲೆತು ಎಲ್ಲಾ ವಿಧದ ಕೆಲಸ ಮಾಡುವ ಅನುಭವ ಹೊಂದಿದ್ದಾರಂತೆ. ಅದು ಈಗ ಚಿತ್ರ ನಿರ್ಮಾಣಕ್ಕೂ ಸಹಕಾರಿಯಾಗುತ್ತಿದೆ. ಆದ್ದರಿಂದ ತಾವು ಚಿತ್ರವನ್ನು ಅದೇ ನಿಟ್ಟಿನಲ್ಲಿ ಸಿದ್ಧಪಡಿಸಿದ್ದೇನೆ ಎನ್ನುತ್ತಾರೆ.
ಹೀಗಾಗಿ ಈ ಚಿತ್ರದಲ್ಲಿ ಪ್ರೀತಿ ಪ್ರೇಮ, ಹೋರಾಟ, ಹೊಡೆದಾಟ, ಸೆಂಟಿಮೆಂಟ್ ಎಲ್ಲದರ ಮಿಶ್ರಣವೂ ಆಗಿದೆಯಂತೆ. ಕಥೆಯ ಎಳೆಯಿಂದ ಹಿಡಿದು, ಅದು ಚಿತ್ರಕಥೆ, ಸಂಭಾಷಣೆ ಹಂತ ತಲುಪುವವರೆಗೂ ಅಣಜಿ ನಿಂತು ಕೆಲಸ ಮಾಡಿದ್ದಾರೆ.
ಅಜಿತ್ ಜತೆ ಗಿರೀಶ್, ವಿಶ್ವ, ಕೈಲಾಶ್ ಹಾಗೂ ದೀಪಕ್ ಚಿತ್ರದಲ್ಲಿ ಇದ್ದಾರೆ. ಈ ಐವರೂ ಸೇರಿ 'ಗುಬ್ಬಿ' ಹಾರಿಸಲಿದ್ದಾರೆ. ಚಿತ್ರಕ್ಕೆ ಅಂಬಾರಿ ಅರ್ಜುನ್ ಸಂಗೀತ ನೀಡಿದ್ದಾರೆ. ಈ ಚಿತ್ರದಲ್ಲಿ ಜನಪ್ರಿಯ ಗೀತೆಯಾದ 'ನೀರಮೇಲೆ ಅಲೆಯ ಉಂಗುರ' ಹಾಡನ್ನು ರಿಮಿಕ್ಸ್ ಮಾಡಲಾಗಿದೆ. ಚಿತ್ರೀಕರಣ ಪೂರ್ಣಗೊಂಡಿದ್ದು, ತಿಂಗಳಲ್ಲೇ ತೆರೆಕಾಣಲಿದೆ ಎನ್ನಲಾಗುತ್ತಿದೆ.