ಶ್ರೀ ಮೋಕ್ಷ ಚಿತ್ರದ ಬಿಡುಗಡೆ ದಿನಾಂಕ ಮುಂದೆ ಹೋಗಿದೆ. ಎಲ್ಲಾ ಸರಿಯಾಗಿ ಆಗಿದ್ದರೆ ಈ ಚಿತ್ರ ಇಂದು ತೆರೆ ಕಾಣಬೇಕಿತ್ತು. ಆದರೆ ಅದೇಕೋ ಮುಂದೆ ಹೋಗಿದ್ದು, ಬರುವ ವಾರ ತೆರೆ ಕಾಣಲಿದೆ ಎಂದು ಗಟ್ಟಿಯಾಗಿ ಹೇಳಲಾಗುತ್ತಿದೆ.
ಮಂಗಳೂರಿನ ಭೂಗತ ಜಗತ್ತಿನ ನಂಟನ್ನು ಸಾರುವ ಈ ಚಿತ್ರ ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದೆ. ಎನ್‌ಕೌಂಟರ್ ದಯಾನಾಯಕ್ ನಂತರ ಒಂದು ವಿಭಿನ್ನ ಚಿತ್ರದಲ್ಲಿ ನಾಯಕ ಸಚಿನ್ ಅಭಿನಯಿಸುತ್ತಿದ್ದಾರೆ. ಅಂಡರ್ವರ್ಲ್ಡ್ ಹಾಗೂ ಪ್ರೀತಿಯ ಎರಡು ಎಳೆ ಇಟ್ಟುಕೊಂಡು ಇಡೀ ಚಿತ್ರವನ್ನು ಹೆಣೆಯಲಾಗಿದೆ.
ಇಲ್ಲಿ ರಕ್ತಪಾತದ ಬದಲು ಮಂಗಳೂರು ಹಾಗೂ ಮುಂಬೈ ನಡುವಿನ ಅಂಡರ್ವರ್ಲ್ಡ್ ಲಿಂಕ್ ಕುರಿತ ಚಿತ್ರಣ ಇದೆ. ಮಚ್ಚು, ಲಾಂಗುಗಳು ಜಳಪಿಸುವುದಕ್ಕಿಂತ ಒಳ ಒಪ್ಪಂದ, ಪಾತಕ ಜಗತ್ತಿನ ನಂಟಿನ ಕಥೆಯಂತೆ. ಇವುಗಳ ಜತೆಗೆ ನವಿರಾದ ಪ್ರೀತಿಯೂ ಇದೆ. ಹಾಡುಗಳಂತೂ ಕೇಳುತ್ತಲೇ ಇರಬೇಕು ಅನ್ನಿಸುತ್ತದೆ. ಅಷ್ಟು ಮುದ್ದಾಗಿವೆ ಎನ್ನುತ್ತಾರೆ ನಾಯಕ ಸಚಿನ್.
ಮಂಗಳೂರು ಮೂಲದ ಭೂಗತ ದೊರೆ ಸಾಧು ಶೆಟ್ಟಿ ಜೀವನ ಚರಿತ್ರೆಯ ಅಂತ ಸುದ್ದಿಯಿದೆ ಅಂದರೆ ಅದನ್ನು ಸಚಿನ್ ನಿರಾಕರಿಸುತ್ತಾರೆ. ಇದೇನಿದ್ದರೂ, ಮಾಧ್ಯಮದಲ್ಲಿ ಬಂದ ಸುದ್ದಿಯ ತುಣುಕನ್ನು ಆಧರಿಸಿ 8 ತಿಂಗಳ ಶ್ರಮದಿಂದ ಸಿದ್ಧಪಡಿಸಿದ ಚಿತ್ರ ಇದು. ಇಲ್ಲಿ ಯಾವುದೇ ವ್ಯಕ್ತಿಯ ಜತೆ ಚಿತ್ರವನ್ನು ನಂಟು ಮಾಡಲು ಸಾಧ್ಯವಿಲ್ಲ. ಅದು ನನಗೆ ಇಷ್ಟವೂ ಆಗಲ್ಲ ಎಂದು ಹೇಳುತ್ತಾರೆ.
ಇದು ಒಂಥರಾ ಭಿನ್ನವಾದ ಕಥೆ. ಸಾಮಾನ್ಯ ಚಿತ್ರಕ್ಕಿಂತ ಭಿನ್ನವಾಗಿದೆ. ಏಕೆಂದರೆ ಇಲ್ಲಿ ಎಲ್ಲವೂ ಒರಿಜಿನಲ್. ಫೈಟ್ ಸೀನಿಗೂ ಡ್ಯೂಪ್ ಬಳಸಿಲ್ಲ. ಯಾರೆಲ್ಲ ನಟಿಸುತ್ತಾರೋ ಅವರಿಂದಲೇ ಖುದ್ದಾಗಿ ಸ್ಟಂಟ್ ಮಾಡಿಸಿದ್ದೇವೆ. ಕಲಾವಿದರ ಅಸಲಿ ಧ್ವನಿಯನ್ನೇ ಬಳಸಲಾಗಿದೆ. ತಂತ್ರಜ್ಞರಲ್ಲಿ ಶೇ.99 ಮಂದಿ ಕನ್ನಡಿಗರು ಇದ್ದಾರೆ. ಕರಾವಳಿಯ ಸಂಸ್ಕ್ಕತಿ, ನೈಜ ಪ್ರಕೃತಿ ಸೌಂದರ್ಯ, ಮೀನುಗಾರರ ಬದುಕು ಬವಣೆ ಎಲ್ಲವೂ ಇದೆ. ಚಿತ್ರ ನಿರ್ಮಾಣಕ್ಕೆ ಸುಮಾರು 3 ಕೋಟಿ ರೂ. ಮೀರಿದೆ ಎನ್ನುತ್ತಾರೆ. ಇವರ ಪ್ರಯತ್ನ ಬರುವ ವಾರ ಫಲ ಕಾಣಲಿದ್ದು, ಜನ ಒಪ್ಪಿಕೊಳ್ಳುತ್ತಾರೋ ಬಿಡುತ್ತಾರೋ ಎಂದು ಕಾಯಬೇಕು.