ವೀರ ಪರಂಪರೆ ಬಗ್ಗೆ ಮಂಡಳಿ ಜೊತೆ ಮುನಿಸಿಕೊಂಡ ಎಸ್.ನಾರಾಯಣ್
MOKSHA
ನಟ, ನಿರ್ದೇಶಕ, ನಿರ್ಮಾಪಕ ಎಸ್.ನಾರಾಯಣ್ ಮತ್ತೊಮ್ಮೆ ಮುರುಕೊಂಡು ಬಿದ್ದಿದ್ದಾರೆ. ಅದೂ ಸಾಮಾನ್ಯರ ಮೇಲೆ ಅಲ್ಲ. ಇತ್ತೀಚೆಗೆ ತಾನೇ ಕೈಟ್ಸ್ ಚಿತ್ರದ ವಿರುದ್ಧ ಹೋರಾಡಿ ಗೆದ್ದ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಸಂತ್ ಕುಮಾರ್ ಪಾಟೀಲ್ ವಿರುದ್ಧ. ರೆಬೆಲ್ ಸ್ಟಾರ್ ಅಂಬರೀಶ್ ಹುಟ್ಟುಹಬ್ಬದ ಜಾಹೀರಾತು ನೀಡುವ ವಿಯಷದಲ್ಲಿ ಇವರಿಬ್ಬರ ನಡುವೆ ಉಂಟಾದ ಕಿರಿಕ್ಕೇ ಇಷ್ಟಕ್ಕೆಲ್ಲಾ ಕಾರಣ.
ಚಿತ್ರ ನಿರ್ದೇಶಕರಾಗಿರುವ ಇವರು ನಟ, ನಟಿಯರ ಮೇಲೆ ಹರಿಹಾಯುವುದು ಸಾಮಾನ್ಯ ಸಂಗತಿ. ಹಣ ಹೂಡಿ ತೆಗೆದ ಚಿತ್ರ ಸೋಲದಿರಲಿ ಎಂಬ ಆಸೆ ಇರುತ್ತದೆ. ಆದರೆ ಇವರೀಗ ಕೆಂಗಣ್ಣು ಬೀರಿರುವುದು ಮಂಡಳಿ ಅಧ್ಯಕ್ಷರ ಮೇಲೆ. ಆದದ್ದು ಇಷ್ಟೇ, ನಟ ಅಂಬರೀಷ್ 59ನೇ ವರ್ಷದ ಹುಟ್ಟುಹಬ್ಬ ಕಳೆದ ತಿಂಗಳ 29ಕ್ಕೆ ನಡೆಯಿತು. ಇದಕ್ಕೊಂದು ವಾರ ಮುನ್ನ ತಮ್ಮ ಹೊಸ ನಿರ್ಮಾಣವಾಗಿರುವ 'ವೀರ ಪರಂಪರೆ' ತಂಡದ ವತಿಯಿಂದ ಒಂದು ಶುಭಾಷಯ ನೀಡುತ್ತೇವೆ. ಚಿತ್ರದಲ್ಲಿ ಅಂಬರೀಶ್ ಸಹ ಅಭಿನಯಿಸುತ್ತಿರುವುದು ನಮಗೂ ಹೆಮ್ಮೆ. ಅದನ್ನೇ ಪೂರ್ಣ ಪುಟದ ಜಾಹೀರಾತು ನೀಡುವ ಮೂಲಕ ಸಲ್ಲಿಸುತ್ತೇವೆ. ಒಪ್ಪಿಗೆ ಕೊಡಿ ಅಂತ ನಾರಾಯಣ್ ಮಂಡಳಿಯನ್ನು ಅರ್ಜಿ ಸಲ್ಲಿಸುವ ಮೂಲಕ ಕೋರಿದರಂತೆ. ಅದೇನು ಆಗಿ ಹೋಯಿತೋ ಗೊತ್ತಿಲ್ಲ. ಪಾಟೀಲರು ಪೂರ್ಣ ಪುಟದ ಜಾಹೀರಾತಿಗೆ ಒಪ್ಪಲೇ ಇಲ್ಲ. ಬೇಕಾದರೆ ಅರ್ಧ ಪುಟ ಹಾಕಿಸಿಕೊಳ್ಳಿ ಹೋಗಲಿ ಅಂತ ಅಂದು ಬಿಟ್ಟರಂತೆ.
ಇದು ನಾರಾಯರ್‌ರನ್ನು ಸಿಟ್ಟಿಗೆಬ್ಬಿಸಿದೆ. ಅದೆಷ್ಟು ಚಿತ್ರದ ಜಾಹೀರಾತು ಪುಟಗಟ್ಟಲೆ ಬರಲ್ಲಾ. ನಾವು ಮಾತ್ರ ಹಾಕಬಾರದು ಅಂದರೆ ಹೇಗೆ? ಇವನ್ನೆಲ್ಲಾ ಕೇಳುತ್ತಾ ಕುಳಿತು ಕೊಳ್ಳಲು ನಾನೇನು ಕಿವಿಗೆ... ಅಂತೆಲ್ಲಾ ಸ್ನೇಹಿತರ ಬಳಿ ಸಿಟ್ಟು ತೋರಿಸಿಕೊಳ್ಳುತ್ತಿದ್ದಾರಂತೆ. ಪಾಪ ನಾಣಿ.
ಇನ್ನು ಪಾಟೀಲರನ್ನೇ ಒಂದು ಮಾತು ಕೇಳೋಣ ಅಂತ ಹೋದರೆ, ನಮ್ಮಲ್ಲಿನ ಕಾನೂನಿನ ಪ್ರಕಾರ ಪುಟಗಟ್ಟಲೆ ಜಾಹೀರಾತು ನೀಡುವ ಅವಕಾಶವಿಲ್ಲ. ಒಂದು ಚಿತ್ರ 75 ಚಿತ್ರಮಂದಿರಕ್ಕೂ ಹೆಚ್ಚು ಕಡೆ ತೆರೆಕಾಣುತ್ತಿದ್ದರೆ ಮಾತ್ರ ಹಾಗೆ ಜಾಹೀರಾತು ಕೊಡಬಹುದು. ಇದು ನಿಯಮ. ಇದನ್ನು ಮೀರಿ ಅಂಬರೀಷ್‌ಗೆ ಮಾತ್ರ ಕೊಟ್ಟರೆ ನಾಳೆ ಉಳಿದವರೂ ಕೇಳುತ್ತಾರೆ. ಮೊನ್ನೆಯಷ್ಟೇ ನಾಗತಿಹಳ್ಳಿ ಚಂದ್ರಶೇಖರ್ ನೂರು ಜನ್ಮಕೂ ಚಿತ್ರದ ಜಾಹೀರಾತಿಗೆ ಅರ್ಜಿ ಸಲ್ಲಿಸಿದ್ದರು. ಅದನ್ನೂ ನಾವು ತಿರಸ್ಕರಿಸಿದ್ದೇವೆ!' ಎಂದು ಹೇಳುತ್ತಾರೆ.