ಸದ್ಯ ಪುನಿತ್‌ರ ಎಲ್ಲಾ ಚಿತ್ರಗಳೂ ಓಡುತ್ತಿವೆ. ಕನ್ನಡದಲ್ಲಿ ಚಲಾವಣೆಯಲ್ಲಿರುವ ನೋಟು ಇವರು. ಯಾವ ಚಿತ್ರವೇ ಆಗಲಿ ಶತದಿನ ಪೂರೈಸುತ್ತೆ ಎನ್ನುವ ವಿಶ್ವಾಸ ಇವರ ಚಿತ್ರಗಳದ್ದು. ಹೀಗಿರುವಾಗ ಹೋಂ ಬ್ಯಾನರ್ ಅಡಿ ನಿರ್ಮಾಣಗೊಳ್ಳುವ ಚಿತ್ರದ ಬಗ್ಗೆ ನಿರೀಕ್ಷೆ ಜೋರಾಗಿಯೇ ಇದೆಯೆಂಬುದು ಖಚಿತ.
ಇದರಿಂದಲೇ 'ಜಾಕಿ' ಚಿತ್ರ ಇದೀಗ ಸಾಕಷ್ಟು ಸುದ್ದಿ ಮಾಡುತ್ತಿದೆ. ಡಾ. ರಾಜ್‌ಕುಮಾರ್ ಅರ್ಪಿಸಿ, ಪಾರ್ವತಮ್ಮ ರಾಜ್‌ಕುಮಾರ್ ನಿರ್ಮಿಸುತ್ತಿರುವ ಜಾಕಿ ವಿಭಿನ್ನ ಕಥಾ ಹಂದರ ಒಳಗೊಂಡ ಚಿತ್ರವಾಗಿದೆಯಂತೆ. ಸದ್ಯ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದ್ದು, ಮೇಲುಕೋಟೆಯಲ್ಲಿ ಚಿತ್ರತಂಡ ತಳ ಊರಿದೆ. ಐದು ದಿನಗಳ ಕಾಲ ಮೇಲುಕೋಟೆ ಸುತ್ತ ಚಿತ್ರೀಕರಣ ನಡೆಯಲಿದೆ. ಇಲ್ಲಿನ ಶೂಟಿಂಗ್ ಮುಗಿದರೆ ಇಡೀ ಚಿತ್ರದ ಚಿತ್ರೀಕರಣ ಮುಗಿದಂತೆ. ಆನಂತರ ಬಿಡುಗಡೆ ದಿನಾಂಕ ನಿಗದಿ ಮಾಡಬೇಕು ಎನ್ನುವುದು ನಟ ಹಾಗೂ ನಿರ್ಮಾಪಕ ರಾಘವೇಂದ್ರ ರಾಜ್‌ಕುಮಾರ್ ಮಾತು. ಆನಂತರ ಇನ್ನಷ್ಟು ಕೆಲಸ ಇರಲಿದೆ. ಗೀತೆಗಳ ಚಿತ್ರೀಕರಣ ಇನ್ನೂ ಆಗಬೇಕಿದೆ ಎಂದು ಸಹ ಅವರು ಹೇಳಿದ್ದಾರೆ.
ನಿರ್ದೇಶಕ ಸೂರಿ ಪ್ರಕಾರ, ಈಗಾಗಲೇ ಪ್ರಮುಖ ಭಾಗಗಳ ಚಿತ್ರೀಕರಣ ಮುಗಿದಿದ್ದು, ಮೂರು ಹಾಡುಗಳ ಚಿತ್ರೀಕರಣ ಬಾಕಿಯಿದೆ. ಹಾಡುಗಳ ಚಿತ್ರೀಕರಣ ವಿದೇಶದಲ್ಲಿ ಮಾಡುವ ಯೋಚನೆಯಿದ್ದರೂ, ಅದಿನ್ನೂ ಅಂತಿಮವಾಗಿಲ್ಲ. ಜೊತೆಗೆ ಯಾವ ದೇಶ ಎಂಬಿತ್ಯಾದಿ ನಿರ್ಣಯಗಳೂ ಇನ್ನೂ ಪಕ್ಕಾ ಆಗಿಲ್ಲ ಎನ್ನುತ್ತಾರೆ.
ಚಿತ್ರಕ್ಕೆ ಯೋಗರಾಜ್ ಭಟ್ ಹಾಗೂ ಜಯಂತ ಕಾಯ್ಕಿಣಿ ಸಾಹಿತ್ಯ ಲಭಿಸಿದೆ. ಸತ್ಯ ಹೆಗಡೆ ಮನೋಜ್ಞ ಛಾಯಾಗ್ರಹಣವೂ ಇದೆ. ಹರಿಕೃಷ್ಣ ಸಂಗೀತ, ದೀಪು ಎಸ್. ಕುಮಾರ್ ಸಂಕಲನ ಇದೆ. ನಾಯಕ ಪುನೀತ್ ರಾಜ್‌ಕುಮಾರ್. ನಾಯಕಿ ಭಾವನಾ ಮೆನನ್. ಉಳಿದಂತೆ ಸುಮಿತ್ರಾ, ರಂಗಾಯಣ ರಘು, ಹೊನ್ನವಳ್ಳಿ ಕೃಷ್ಣ, ರವಿ ಕಾಳೆ, ಸತ್ಯಜಿತ್, ಶೋಭರಾಜ್, ರಾಜು ತಾಳಿಕೋಟೆ, ಬುಲೆಟ್ ಪ್ರಕಾಶ್, ರವಿಕಿರಣ್, ಹರ್ಷಿಕಾ ಪೂಣಚ್ಚ, ಸುಷ್ಮಾ, ಬಿರಾದಾರ್ ಮುಂತಾದವರು ಇದ್ದಾರೆ.