ನಟ ರವಿಚಂದ್ರನ್‌ಗೂ ಬೆಂಗಳೂರಿನ ಅತ್ಯಂತ ಹಳೆಯ ಚಿತ್ರ ಮಂದಿರವಾದ ಕಪಾಲಿಗೂ ಅದೇನೋ ಅವಿನಾಭಾವ ಸಂಬಂಧ. ಇದು ಕಾಕತಾಳಿಯವೋ, ಏನೋ ಆದರೆ ಇವರ ಅಭಿನಯದ 'ಪ್ರೇಮಲೋಕ' ಚಿತ್ರ ಇದೇ ಚಿತ್ರಮಂದಿರದಲ್ಲಿ ಅಂದು ತೆರೆಕಂಡಿತ್ತು. ಇಂದು ಅದೇ ಚಿತ್ರ ಮಂದಿರದಲ್ಲೇ 'ಹೂ' ಸಹ ಬಿಡುಗಡೆ ಭಾಗ್ಯ ಕಾಣುತ್ತಿದೆ.
ರವಿಚಂದ್ರನ್‌ಗೆ ಐವತ್ತು ತುಂಬುತ್ತಿರುವ ಸಂದರ್ಭದಲ್ಲಿಯೇ ಈ ಚಿತ್ರವೂ ಸುವರ್ಣ ಸಂಭ್ರಮದ ರೀತಿ ಬರುತ್ತಿರುವಾಗ ಕಪಾಲಿಯೇ ಇವರ ಅದೃಷ್ಟಕ್ಕೆ ಸಿಕ್ಕಿರುವುದು ವಿಶೇಷ. ಸುಮಾರು ಆರು ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಈ ಅದ್ದೂರಿ ಚಿತ್ರ ಅಂದಿನ ಪ್ರೇಮಲೋಕದ ಮಾದರಿಯ ಚಿತ್ರವೇ ಆದರೂ, ಅಂದಿಗೂ ಇಂದಿಗೂ ಸಾಕಷ್ಟು ವ್ಯತ್ಯಾಸ ಇದೆ. ರವಿಚಂದ್ರನ್ ಚಿತ್ರ ತೆಗೆಯುವ ಶೈಲಿಯೂ ಬದಲಾಗಿದೆ.
ಕಣ್ಣಳತೆಗೆ ಮೀರಿ ಖರ್ಚು ಮಾಡುವುದು, ಒಂದು ನಾಯಕಿಯನ್ನು ಮತ್ತೊಂದು ಚಿತ್ರದಲ್ಲಿ ಬಳಸದೇ ಇರುವುದು, ಒಂದೇ ಒಂದು ಹಾಡಿಗಾಗಿ ಕೋಟಿ ಕೋಟಿ ಕರಗಿಸುವುದು, ನಾಯಕಿಯರಲ್ಲಿ ಹುದುಗಿರುವ ಅಂದವನ್ನು ತಮ್ಮದೇ ಆದ ದೃಷ್ಟಿಕೋನದಲ್ಲಿ ತೋರಿಸುವುದು ಇವೆಲ್ಲವೂ ಎಲ್ಲೂ ಬದಲಾದಂತೆ ತೋರುವುದೇ ಇಲ್ಲ.
ಇವರ ಒಂದು ಮಹತ್ವಾಕಾಂಕ್ಷೆ ಅಂದರೆ ಭವಿಷ್ಯದಲ್ಲಿ ಎಂದೂ ಸೋಲಬಾರದು ಅಂದುಕೊಂಡಿದ್ದಾರಂತೆ. ಗೆಳೆಯ ಪ್ರಕಾಶ್ ಶೆಟ್ಟಿ ಜತೆ ಮುಂದಿನ ತಯಾರಿಯಾಗಿ 'ಮಂಜಿನ ಹನಿ' ಚಿತ್ರವನ್ನು ಮರುಚಿತ್ರೀಕರಣ ಮಾಡುತ್ತಿದ್ದಾರೆ. ಇದು ಮುಗಿದ ಮೇಲೆ 'ಆಸೆ' ಸೆಟ್ಟೇರುತ್ತದೆಯಂತೆ. ಆಮೇಲೆ 'ಅಂತರ್ಯಾಮಿ' ಹಾಗೂ 'ಒಂದ್ ನಿಮಿಷ' ಬರಲಿವೆಯಂತೆ. ಒಂದು ನಿಮಿಷ ಚಿತ್ರದ ಮೂಲಕ ಮಗನನ್ನು ಚಿತ್ರರಂಗಕ್ಕೆ ಪರಿಚಯಿಸುವುದು ಅವರ ಆಶಯ.
ಹೂ ಚಿತ್ರದ ಬಗ್ಗೆ ಹೇಳಿ ಅಂದರೆ ಇದು ಮಕರಜ್ಯೋತಿಯಂಥ ಚಿತ್ರ. ಇದು ವಸಂತಂ ಚಿತ್ರದ ರೀಮೇಕ್. ಚಿತ್ರದ ಹಲವು ಭಾಗ ಕಪ್ಪು ಬಿಳುಪಿನಿಂದ ಕೂಡಿರುತ್ತದೆ. ಒಂದೇ ಒಂದು ನಿಮಿಷ ಸಿನಿಮಾ ಬೋರ್ ಅನ್ನಿಸಲ್ಲಾ ಅಂತ ಧೈರ್ಯವಾಗಿ ಹೇಳ್ತಾರೆ. ಯಾವುದಕ್ಕೂ ಇನ್ನೊಂದು ವಾರದಲ್ಲಿ ಫಲಿತಾಂಶ ಲಭ್ಯವಾಗುತ್ತೆ ಬಿಡಿ.