ರಾಜಧಾನಿ ಚಿತ್ರ ಶೂಟಿಂಗ್ ಆರಂಭಿಸಿದಂದಿನಿಂದಲೂ ಒಂದಲ್ಲಾ ಒಂದು ಕಾರಣದಿಂದ ವಿವಾದಕ್ಕೆ, ಸುದ್ದಿಗೆ ಒಳಗಾಗುತ್ತಲೇ ಇದೆ. ಮೊದಲು ಒಬ್ಬ ನಾಯಕಿ ನಮ್ಮಂಥ ಹೊಸಬರೊಂದಿಗೆ ಕೆಲಸ ಮಾಡುವುದಿಲ್ಲವೆಂದು ಅವಮಾನ ಮಾಡಿ ಹೊರನಡೆದಿದ್ದಾಳೆ ಎಂದು ಈ ಚಿತ್ರದ ನಿರ್ಮಾಪಕ ಸೌಮ್ಯ ಸತ್ಯನ್ ರಾಂಗಾಗಿದ್ದರು. ಕೆಲವೇ ದಿನಗಳ ಹಿಂದೆ ಇದರ ನಿರ್ದೇಶಕರೂ ಕೂಡಾ ತಂಡದಿಂದ ಹೊರಬಿದ್ದಿದ್ದರು. ಈಗ ಬಂದಿರುವ ಸುದ್ದಿ ಪ್ರಕಾರ ಚಿತ್ರದ ನಾಯಕಿ ಶೀನಾ ಶಹಬಾದಿ ಒಂದು ದಿನ ಕಾಲು ನೋವು ಎಂದು ಹೇಳಿ ಕೈ ಕೊಟ್ಟು ಆಟ ಆಡಿಸಿದ್ದಾಳೆ.
ನಟಿಮಣಿಗೆ ಕಾಲು ನೋವು ಅನ್ನುವುದು ಸಾಮಾನ್ಯ. ಕಳ್ಳನಿಗೆ ಒಂದು ಪಿಳ್ಳೆ ನೆವ ಅಂತ ಆಕೆ ಹೇಳಿರಲೂ ಸಾಕು. ಆದರೆ ನಿರ್ಮಾಪಕರು ವಿಷಯವನ್ನು ಅಲ್ಲಿಗೆ ಬಿಟ್ಟಿಲ್ಲ. ಮೊನ್ನೆ ತಾನೆ ಕೈಟ್ಸ್ ಚಿತ್ರದ ವಿರುದ್ಧವೇ ಹೋರಾಡಿ ಗೆದ್ದ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಸಂತ ಕುಮಾರ ಪಾಟೀಲರ ಬಳಿ ನೇರವಾಗಿ ಆಕೆಯ ವಿರುದ್ಧ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ಸಲ್ಲಿಸಿದ್ದಾರೆ.
ಚಿತ್ರದ ಚಿತ್ರೀಕರಣ ಬಹುಪಾಲು ಮುಗಿದಿದೆ. ಶೀನಾರ ಪಾತ್ರದ ಚಿತ್ರೀಕರಣ ಸಹ ಶೇ.70 ರಷ್ಟು ಮುಗಿದಿದೆ. ಉಳಿದ ಭಾಗವನ್ನು ಪೂರ್ಣಗೊಳಿಸಲು ಮೇ 26 ಮತ್ತು 27 ರಂದು ಬೆಂಗಳೂರಿಗೆ ಬಂದಿದ್ದಳು. ಆಕೆಯ ಒಪ್ಪಿಗೆ ಪಡೆದೇ ಶೆಡ್ಯೂಲ್ ಹಂಚಿಕೆ ಮಾಡಲಾಗಿತ್ತು. 25ರಂದೇ ಬಂದ ಶೀನಾ ಆರಾಮವಾಗಿ ಹೋಟೆಲ್ನಲ್ಲಿ ಉಳಿದಿದ್ದಾರೆ. ಮೇ 26 ರ ಬೆಳಗ್ಗೆ ಮೆತ್ತಗೆ `ಕಾಲು ನೋವು' ಎಂದು ರಗಳೆ ತೆಗೆದಿದ್ದಾರೆ. ಆಸ್ಪತ್ರೆಗೂ ಹೋಗಿ ಬಂದಾಗಿದೆ. ಆದರೂ ಶೀನಾ ಶೂಟಿಂಗ್ ಬಗ್ಗೆ ಆಸಕ್ತಿ ತೋರಿಸಲೇ ಇಲ್ಲ. ಬೇರೆ ದಾರಿ ಕಾಣದೆ ಶೂಟಿಂಗ್ ನಿಂತಿದೆ. ಈಗ ನಿರ್ಮಾಪಕರು ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ.
ಮುಂದೇನಾಗುವುದೋ ದೇವ ದೇವಾ, ಒಟ್ಟಾರೆ ರಾಜಧಾನಿಗೆ ಬಡಿದಿರುವ ಗೃಹಣ ದೂರ ಮಾಡುವವರು ಯಾರಿದ್ದಾರೂ ದೇವನೋ ಬಲ್ಲ. ಅಂದಹಾಗೆ, ಚಿತ್ರದಲ್ಲಿ ಮೊಗ್ಗಿನ ಮನಸು ಖ್ಯಾತಿಯ ಯಶ್ ನಾಯಕನಾಗಿ ನಟಿಸುತ್ತಿದ್ದಾರೆ.