ಚಿತ್ರವಿಚಿತ್ರ ಹೆಸರುಗಳ ಚಿತ್ರಗಳು ಇಂದು ಸ್ಯಾಂಡಲ್ ವುಡ್ಡಿನಲ್ಲಿ ತೀರಾ ಸಾಮಾನ್ಯ. ಇಂಥ ಸಂದರ್ಭದಲ್ಲಿ ಕುತೂಹಲಕಾರಿ ಹೆಸರಿನ ಚಿತ್ರವೊಂದು ತೆರೆಗೆ ಬರಲಿದೆ. ಚಿತ್ರದ ಹೆಸರು 'ವಿನಾಯಕ ಗೆಳೆಯರ ಬಳಗ'.
ಹೌದು. ಈ ಹೆಸರಿನ ಚಿತ್ರ ಇದೀಗ ಗಾಂಧಿನಗರಿಯಲ್ಲಿ ಸುದ್ದಿ ಮಾಡುತ್ತಿದೆ. ಈ ಚಿತ್ರದ ವಿಶೇಷ ಅಂದರೆ ಅದ್ದೂರಿ ಗಣೇಶೋತ್ಸವ. ನಿರ್ದೇಶಕ ನಾಗೇಂದ್ರ ಪ್ರಸಾದ್ ಈ ಚಿತ್ರದ ಮೂಲಕ ಬರೋಬ್ಬರಿ 25 ವರ್ಷ ಹಿಂದಕ್ಕೆ ಕರೆದೊಯ್ಯಲಿದ್ದಾರಂತೆ. ಅರೆ, ಇವರೇನು ತಮ್ಮ ಪೂರ್ವಜರ ಅಥವಾ ಬಾಲ್ಯದ ಕಥೆ ಹೇಳಲು ಹೊರಟು ಬಿಟ್ಟರಾ ಅಂತ ಗಾಬರಿ ಅಗಬೇಡಿ. ರಾಜಾರಾಂ ಮೋಹನ್ ರಾಯ್ ಪರಿಚಯಿಸಿದ ಗಣೇಶೋತ್ಸವ ಎಲ್ಲೆಡೆ ಎಷ್ಟೊಂದು ಅದ್ದೂರಿಯಗಿ ಆಚರಣೆ ಆಗುತ್ತಿದೆ ಎನ್ನುವುದು ಎಲ್ಲರಿಗೂ ಗೊತ್ತು. ಊರಿಗೆ ಊರೇ ಗಣೇಶನನ್ನು ಆರಾಧಿಸುವ ಪರಿಯನ್ನು ಎಲ್ಲರೂ ಕಂಡಿರುತ್ತಾರೆ. ಇವೆಲ್ಲಾ ಮರುಕಳಿಸಲಿದೆ.
ಸಾಮಾನ್ಯವಾಗಿ ಈ ಆಚರಣೆ ಎಲ್ಲಾ ಕಡೆ ಆಗುತ್ತದೆಯಾದರೂ, ಹಳ್ಳಿಗಳಲ್ಲಿ ಬಹಳ ವಿಶಿಷ್ಟವಾಗಿ ಆಗುತ್ತದೆ. ಹೀಗಾಗಿ ಯಾರೊಬ್ಬ ಹಳ್ಳಿಗನೂ ಇದನ್ನು ಮರೆತಿರಲಿಕ್ಕಿಲ್ಲ. ಹಳ್ಳಿಗಳಲ್ಲಿ ಗಣೇಶ ವಿಸರ್ಜನೆ ಇಂದಿಗೂ ಚಾಲ್ತಿಯಲ್ಲಿದೆ. ಆದರೆ, ವಿಪರ್ಯಾಸ ಹಿಂದೆ ಇದ್ದ ಅದ್ದೂರಿತನ ಇಂದು ಕಡಿಮೆಯಾಗಿದೆ. ಎಲ್ಲರೂ ಕಮರ್ಷಿಯಲ್ ಆಗಿದ್ದಾರೆ. ವಾರ-ತಿಂಗಳುಗಟ್ಟಲೇ ಇರುತ್ತಿದ್ದ ಗಣಪ ಇಂದು ಬೆಳಗ್ಗೆಯಿಂದ ಸಂಜೆಯವರೆಗೆ ಇದ್ದರೆ ಹೆಚ್ಚು.
ಆದರೆ ನಾಗೇಂದ್ರ ಪ್ರಸಾದ್ ಈಗ ಅದೇ 25 ವರ್ಷದ ಹಿಂದಿನ ವೈಭವವನ್ನು ತಮ್ಮ 'ವಿನಾಯಕ ಗೆಳೆಯರ ಬಳಗ' ಚಿತ್ರದ ಮೂಲಕ ತೆರೆದಿಡಲು ಹೊರಟಿದ್ದಾರೆ. ದೊಡ್ಡಬಳ್ಳಾಪುರದ ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ. ಈಗಾಗಲೇ 20 ದಿನದ ಚಿತ್ರೀಕರಣ ಪೂರ್ಣಗೊಂಡಿದ್ದು, ಉಳಿದ ಭಾಗವನ್ನು ಸದ್ಯದಲ್ಲೇ ಮುಗಿಸಲಿದ್ದಾರೆ. ಕ್ಲೈಮ್ಯಾಕ್ಸ್ ನಲ್ಲಿ 108 ಗಣೇಶನ ವಿಗ್ರಹಗಳನ್ನು ಬಳಸಲಾಗುವುದು ಎನ್ನುತ್ತಾರೆ ನಿರ್ದೇಶಕರು.
ಈ ಬಳಗದಲ್ಲಿ ವಿಜಯ ರಾಘವೇಂದ್ರ ಇದ್ದಾರೆ. ನವೀನ್ ಕೃಷ್ಣ ಬಳಗದ ಪ್ರಧಾನ ಕಾರ್ಯದರ್ಶಿಯ ಪಾತ್ರದಲ್ಲಿ ಮಿಂಚಲಿದ್ದಾರೆ. ಮನೀಶ್, ಕುರಿ ಪ್ರತಾಪ್ ಹಾಗೂ ಪೆಟ್ರೋಲ್ ಪ್ರಸನ್ನ ಇವರಿಬ್ಬರ ಹಿಂದಿರುತ್ತಾರೆ. ಎಲ್ಲರ ಹೇರ್ ಸ್ಟೈಲ್ ಹಿಂದಿನ ಕಾಲಕ್ಕೆ ತಕ್ಕಂತಿರುತ್ತದಂತೆ. ಶೋಭರಾಜ್ ಕೂಡ ಹಳೇ ಪಾತ್ರೆ, ಹಳೆ ಗೆಟಪ್ಪು ಎನ್ನಲಿದ್ದಾರೆ! ಮೇಘನಾ ಘಾವಕರ್ ಹಳ್ಳಿ ಹುಡುಗಿಯ ಪಾತ್ರ ಮಾಡುತ್ತಿದ್ದಾರೆ. ಅಂತೂ ಬರುವ ಗಣೇಶೋತ್ಸವಕ್ಕೆ ಚಿತ್ರ ರೆಡಿಯಾಗಬಹುದು ಅನಿಸುತ್ತೆ.