ಲಿವಿಂಗ್ ಟುಗೆದರ್ ಅಲ್ಲ, ನಮಗೆ ಮದ್ವೆಯಾಗಿದೆ: ಸುಚೇಂದ್ರ, ಪವಿತ್ರಾ ಲೋಕೇಶ್!
ಒಂದು ಪತಿಯನ್ನು ಬಿಟ್ಟು ಇನ್ನೊಬ್ಬನನ್ನು ಕಟ್ಟಿಕೊಳ್ಳುವುದು, ಪತ್ನಿಯನ್ನು ಬಿಟ್ಟು ಬೇರೊಬ್ಬಳ ಜತೆ ಸುತ್ತುವುದು, ಅನಿವಾರ್ಯ ಬಂದರೆ ಅವಳನ್ನೇ ಕಟ್ಟಿಕೊಳ್ಳುವುದು ಚಿತ್ರ ಬದುಕಿನವರಿಗೆ ಸಾಮಾನ್ಯ. ಕನ್ನಡ ಕಿರುತೆರೆಯ ಲೋಕದಲ್ಲೂ ಇದು ಸಾಮಾನ್ಯ. ಅಥವಾ ನಟ ನಟಿಯರಾದ್ದರಿಂದ ಇವು ಸಾರ್ವಜನಿಕರ ಕಣ್ಣಿಗೆ ಬೇಗ ಕಾಣುತ್ತವೆ ಅಂತಾನೂ ಬೇಕಾದರೆ ಹೇಳಬಹುದೇನೋ.
ಇದೀಗ ಕಿರುತೆರೆ ನಟ ಸುಚೇಂದ್ರ ಪ್ರಸಾದ್ ಹಾಗೂ ನಟಿ ಪವಿತ್ರಾ ಲೋಕೇಶ್ ತಾವಿಬ್ಬರೂ ಮದುವೆಯಾಗಿದ್ದೇವೆ ಎಂದಿದ್ದಾರೆ. ಇತ್ತೀಚೆಗೆ ಕನ್ನಡದ ಪ್ರಮುಖ ಪತ್ರಿಕೆಯೊಂದು ಈ ಇಬ್ಬರೂ ಲಿವಿಂಗ್ ಟುಗೆದರ್ (ಮದುವೆಯಾಗದೆಯೇ ಜೊತೆಗೇ ಸಂಸಾರ ನಡೆಸುವುದು) ಮಾದರಿಯಲ್ಲಿ ಬದುಕುತ್ತಿದ್ದಾರೆ ಎಂದು ವರದಿ ಮಾಡಿತ್ತು. ತಮ್ಮ ಬಗ್ಗೆ ಬರೆದ ಈ ವರದಿಯ ಕುರಿತು ಪ್ರತಿಕ್ರಿಯಿಸಿರುವ ಈ ಜೋಡಿ, ತಾವಿಬ್ಬರೂ ಮೊದಲೇ ಪ್ರತ್ಯೇಕವಾಗಿ ಬೇರೆ ಬೇರೆ ವ್ಯಕ್ತಿಗಳ ಜೊತೆ ವಿವಾಹವಾಗಿದ್ದವರು. ಆದರೆ ಇಬ್ಬರ ಸಂಸಾರದಲ್ಲೂ ಬಿರುಕೊಡೆದಿತ್ತು. ನಮ್ಮಿಬ್ಬರ ನಡುವೆ ಹೊಂದಾಣಿಕೆಯಿದ್ದು, ನಾವು ಈಗಾಗಲೇ ವಿವಾಹವಾಗಿಯೇ ಸಂಸಾರ ನಡೆಸುತ್ತಿದ್ದೇವೆ. ಹಳೆಯ ದಾಂಪತ್ಯ ಇಬ್ಬರದ್ದೂ ಮುರಿದು ಬಿದ್ದುದರಿಂದ ಇಬ್ಬರೂ ಪ್ರತ್ಯೇಕವಾಗಿ ವಿಚ್ಛೇದನ ಪಡೆದಿದ್ದೆವು. ಅವಕ್ಕೆ ದಾಖಲೆ ಇವೆ. ಇದೀಗ ಮದುವೆಯಾಗಿರುವುದಕ್ಕೂ ದಾಖಲೆ ಇದೆ ಎಂದು ಹೇಳುವ ಮೂಲಕ ಗಾಸಿಪ್ಪಿಗರ ಬಾಯಿ ಮುಚ್ಚಿಸಿದ್ದಾರೆ.
ಇಂದು ಕಾಲೇಜು ಮಕ್ಕಳೂ ಕೂಡಾ ಲಿವಿಂಗ್ ಟುಗೆದರ್ ಮಟ್ಟಕ್ಕೆ ಇಳಿದಿದ್ದಾರೆ. ಬಾಲಿವುಡ್ಡಿನಲ್ಲಂತೂ ತೀರಾ ಕಾಮನ್ ಆಗಿರುವ ಇಂಥ ಸಂಬಂಧ ಈಗ ಕನ್ನಡ ಸಿನಿಮಾ, ಕಿರುತೆರೆ ಲೋಕದಲ್ಲೂ ಕಡಿಮೆಯಿಲ್ಲ. ಅಂಥದ್ದೊಂದು ವಾರ್ತೆಯನ್ನು ಇತ್ತೀಚೆಗೆ ಕನ್ನಡದ ಪ್ರಮುಖ ಪತ್ರಿಕೆಯೊಂದು ವರದಿ ಮಾಡಿತ್ತು. ಈ ವರದಿಯ ಪ್ರಕಾರ, ನೃತ್ಯ ಜೋಡಿಯೆಂದೇ ಪ್ರಸಿದ್ಧಿ ಪಡೆದ ಕಿರುತೆರೆ ನಟ ಹಾಗೂ ದಂಪತಿಗಳಾದ ಶಮಾ- ಸಂಜಯ್ ಜೀವನದಲ್ಲಿ ಏರುಪೇರಾಗಿದ್ದು, ವಿಚ್ಛೇದನವರೆಗೂ ತಲುಪಿದೆ. ಇದೇ ವೇಳೆ ಶಮಾ ಹಾಗೂ ನಟ ರಘು ಸಮರ್ಥರ ನಡುವೆ ಏನೋ ಇದೆ ಎಂಬ ಬಗ್ಗೆಯೂ ಗುಸುಗುಸು ಕೇಳಿ ಬರುತ್ತಿದೆ ಎಂದು ಪತ್ರಿಕೆ ಇದೇ ಸಂದರ್ಭ ವರದಿ ಮಾಡಿತ್ತು.