ರಿಮೇಕ್ ಚಿತ್ರ ಮಾಡೋದು ಎಂಜಲು ತಿಂದಂತೆ: ಕಾಸರವಳ್ಳಿ ಗುಡುಗು
MOKSHA
ಕನ್ನಡದ ಹೆಮ್ಮೆಯ ಗಿರೀಶ್ ಕಾಸರವಳ್ಳಿ ಸದಾ ಮಿತಭಾಷಿ. ತಾವಾಯಿತು, ತಮ್ಮ ಕೆಲಸವಾಯಿತು ಅಂತ ಇರುವವರು. ಇದೀಗ ಇವರೂ ಗುಡುಗಿದ್ದಾರೆ. ಇತ್ತೀಚೆಗೆ ನಗರದಲ್ಲಿ ನಡೆದ ಶ್ರೀ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಅವರು ರಿಮೇಕ್ ಚಿತ್ರಗಳ ಮೇಲೆ ಹರಿಹಾಯ್ದಿದ್ದಾರೆ.
ರಿಮೇಕ್ ಮಾಡುವುದೂ ಒಂದೆ, ಇನ್ನೊಬ್ಬರ ಎಂಜಲನ್ನು ತಿನ್ನುವುದೂ ಒಂದೇ.' ಎಂದು ಅವರು ಹೇಳುವ ಮೂಲಕ ರಿಮೇಕ್ ಚಿತ್ರ ಸರದಾರರ ಮುಖಕ್ಕೆ ಬಿಸಿ ನೀರನ್ನು ಎರಚಿದ್ದಾರೆ. ಇತ್ತೀಚೆಗೆ ಹೆಚ್ಚುತ್ತಿರುವ ರಿಮೇಕ್ ಹಾವಳಿ ನನ್ನ ನಿದ್ದೆಗೆಡಿಸಿದೆ. ಒಂದು ಪರಭಾಷಾ ಚಿತ್ರಕ್ಕೆ ಲಕ್ಷ ಲಕ್ಷ ಕೊಟ್ಟು, ಖರೀದಿ ಮಾಡುವ ಬದಲು, ಅದೇ ದುಡ್ಡಿನ ಒಂದಂಶವನ್ನು ನಮ್ಮವರಿಗೆ ಏಕೆ ಕೊಡಬಾರದು ಎಂದು ಅವರು ಇಲ್ಲಿ ಪ್ರಶ್ನಿಸಿದ್ದಾರೆ. ಒಟ್ಟಾರೆ ಸ್ವಂತ ಚಿತ್ರ ಮಾಡುವುದರಲ್ಲಿರುವ ಸುಖ ರಿಮೇಕಿನಲ್ಲಿ ಖಂಡಿತಾ ಇಲ್ಲ ಎನ್ನುತ್ತಾರೆ ಕಾಸರವಳ್ಳಿ.
ಅಂದಹಾಗೇ ಕಾಸರವಳ್ಳಿ ನಿರ್ದೇಶನದ 'ಕನಸೆಂಬ ಕುದುರೆಯನೇರಿ' ಚಿತ್ರ ಸದ್ಯದಲ್ಲೇ ಲೋಕಾರ್ಪಣೆಗೊಳ್ಳಲಿದೆ. ಛೇಂಬರ್ ಚುನಾವಣಾ ಪ್ರಯುಕ್ತ ಇಷ್ಟು ದಿನ ಸುಮ್ಮನಿದ್ದ ನಿರ್ಮಾಪಕ ಬಸಂತ್ ಕುಮಾರ್ ಪಾಟೀಲ್, ಸದ್ಯದಲ್ಲೇ ಚಿತ್ರವನ್ನು ದೇಶವಿದೇಶಗಳಲ್ಲಿ ಪ್ರದರ್ಶಿಸುವ ಯೋಜನೆ ಹೊತ್ತಿದ್ದಾರೆ. ಹಿಂದೆ ಇದೇ ಬಳಗ ತಯಾರಿಸಿದ್ದ 'ಗುಲಾಬಿ ಟಾಕೀಸ್'ಗೆ ವಿಶ್ವಮನ್ನಣೆ ಸಿಕ್ಕಿತ್ತು. ಈ ಸಾರಿ ಕುದುರೆಯ ಸವಾರಿ ಹೇಗಿರುತ್ತೋ ಕಾದು ನೋಡಬೇಕು.