ಚಿತ್ರರಂಗ ಹಾಗೂ ರಾಜಕೀಯ ಎರಡರಲ್ಲೂ ಸೋತು ಸುಣ್ಣವಾಗಿರುವ ಒಂದು ಕಾಲದ ಜನಪ್ರಿಯ ನಟ, ರಾಜಕಾರಣಿ ಕುಮಾರ್ ಬಂಗಾರಪ್ಪ ಅಥವಾ ವಸಂತ್ ಕುಮಾರ್ ಈಗ ಎಲ್ಲಿದ್ದಾರೆ ಎಂದರೆ ಸೊರಬದ ಜನರೇ ಒಮ್ಮೆ ತಲೆ ಕೆರೆದುಕೊಳ್ಳುತ್ತಾರಂತೆ.
ಅಶ್ವಮೇಧ ಹೊರತು ಪಡಿಸಿ ಅಂಥ ಉತ್ತಮ ಚಿತ್ರ ನೀಡದ, ಶಾಸಕರಾಗಿ ಎರಡು ಅವಧಿಗೆ ಆಯ್ಕೆಯಾಗಿ ಹೇಳಿಕೊಳ್ಳುವಂಥ ಸಾಧನೆ ಮಾಡದೇ ಕೊನೆಗೆ ಹರತಾಳು ಹಾಲಪ್ಪ ಹಾಗೂ ತಮ್ಮ ಸಹೋದರ ಮಧು ವಿರುದ್ಧ ಸೋತ ಕುಮಾರ ಏಳಿಗೆಯಾಗಿದ್ದು ಕಡಿಮೆಯೇ. ಇಂಥ ಕುಮಾರ ಬಂಗಾರಪ್ಪ ಇದೀಗ ಇದೀಗ ಮುಂದಿನ ವರ್ಷ ರಾಜಕೀಯ ಬದುಕಿಗೆ ವಿದಾಯ ಹೇಳುವ ಸಾಧ್ಯತೆಯನ್ನು ತೋರುತ್ತಿದ್ದಾರೆ.
80ರ ದಶಕದಲ್ಲಿ 'ವಿಜಯೋತ್ಸವ'ದ ಮೂಲಕ ಸ್ಯಾಂಡಲ್‌ವುಡ್ಡಿಗೆ ಬಂದು, ಶರವೇಗದ ಸರದಾರ, ನಿರ್ಬಂಧ, ತೇಜ, ಕ್ಷೀರಸಾಗರ, ಅಂಗೈಯಲ್ಲಿ ಅಪ್ಸರೆ, ಚೈತ್ರದ ಚಿಗುರು, ನವತಾರೆ ಹೀಗೆ ಹತ್ತಾರು ಚಿತ್ರಗಳಲ್ಲಿ ನಟಿಸಿ, ಹಾಲಿವುಡ್ಡಿನ 'ಬ್ಲೂ ಕ್ರಿಸ್ಟಲ್'ವರೆಗೆ ತಲುಪಿದ್ದರು. ಸಿನಿಮಾ ಬದುಕಿನಲ್ಲಿ 'ಅಶ್ವಮೇಧ' ಬಿಟ್ಟರೆ ಬೇರ‌್ಯಾವುದೂ ಕೈಹಿಡಿಯಲೇ ಇಲ್ಲ.
ಇದೀಗ ಕುಮಾರ ಮತ್ತೆ ಚಿತ್ರರಂಗದತ್ತ ಮುಖ ಮಾಡಿದ್ದಾರೆ. ತಮ್ಮ ಗೆಲುವು ಏನಾದರೂ ಇದ್ದರೆ, ಅದು ಚಿತ್ರರಂಗದಲ್ಲಿ ಎನ್ನುವ ಮನವರಿಕೆ ಅವರಿಗೆ ಆದಂತೆ ತೋರುತ್ತಿದೆ. ಉದ್ದನೇ ಕೂದಲು ಬಿಟ್ಟು, ಒಪ್ಪವಾಗಿ ಅದನ್ನು ಬಾಚಿಕೊಂಡು ಮಂಗಳೂರಲ್ಲಿ ಸಿಕ್ಕ ಈ ನಟಶೇಖರ ರೇಣುಕಾಂಬ ಬ್ಯಾನರ್ ಅಡಿಯಲ್ಲಿ ಐತಿಹಾಸಿಕ ಚಿತ್ರವೊಂದನ್ನು ತಯಾರಿಸುತ್ತಿದ್ದೇನೆ ಎಂದರು.
ರಕ್ತ ಕಣ್ಣೀರು ನಂತರ ನಟಿಸುತ್ತಿರುವ ಚಿತ್ರ ಇದು. ನಿರ್ದೇಶಕ ನಾಗಾಭರಣ ಜತೆ ಐತಿಹಾಸಿಕ ಚಿತ್ರ 'ಕೆಳದಿ ಶಿವಪ್ಪ ನಾಯಕ' ನಿರ್ಮಾಣಕ್ಕಾಗಿ ಕಳೆದೆರಡು ವರ್ಷದಿಂದ ಕುಮಾರ್ ಉದ್ದ ಕೂದಲು ಬಿಟ್ಟಿದ್ದಾರೆ. ನಾಗಾಭರಣ ಟಿವಿ ಧಾರಾವಾಹಿಗಳಲ್ಲಿ ಬ್ಯುಸಿಯಾಗಿದ್ದಾರೆ. ಹೊಸ ಚಿತ್ರದ ಕಥೆ ಏನ್ರಿ ಎಂದರೆ, 'ಇನ್ನೂ ಒಂದೆರಡು ವರ್ಷ ಕಾಯಬೇಕಾಗಬಹುದು. ಈಗಾಗಲೇ ಶೂಟಿಂಗ್ ಸ್ಪಾಟ್‌ಗಳ ಬೇಟೆ ಆರಂಭಿಸಿದ್ದೇವೆ' ಎನ್ನುತ್ತಾರೆ. ಅದ್ಯಾವಾಗ ಚಿತ್ರ ಆರಂಭವಾಗುತ್ತೋ, ಇವರು ನಾಯಕರಾಗಿ ಪರದೆ ಮೇಲೆ ಬರುತ್ತಾರೋ ಅಂತ ಕಾದು ನೋಡುತ್ತಿದ್ದಾರೆ ಕೆಲವೇ ಕೆಲವು ಅಭಿಮಾನಿಗಳು.