ಈ ಮಾಸಾಂತ್ಯಕ್ಕೆ ಡೆಡ್ಲಿ ಸೋಮ-2 ಬರಲಿದ್ದಾನೆ, ದಾರಿ ಬಿಡಿ...
MOKSHA
ಡೆಡ್ಲಿ ಸೋಮ-2 ಚಿತ್ರದ ಚಿತ್ರೀಕರಣ ಬಹುತೇಕ ಮುಗಿದು ಹೋಗಿದೆ. ಮೊನ್ನೆ ಕ್ಲೈಮ್ಯಾಕ್ಸ್ ಸಹ ನಡೆದು ಹೋಯಿತು. ಅದು ಆಗಿದ್ದು ಕಲಾಸಿಪಾಳ್ಯದಲ್ಲಿ. ಬಹುದಿನದ ನಂತರ ಒಂದು ಆಕ್ಷನ್ ಚಿತ್ರದಲ್ಲಿ ನಟ ಆದಿತ್ಯ ನಟಿಸಿದ್ದಾರೆ. ಇದರ ಕೊನೆಯ ಹಂತದ ಶೂಟಿಂಗ್ ಕಲಾಸಿಪಾಳ್ಯದಲ್ಲಿ ನಡೆದಾಗ ಚಿತ್ರೀಕರಣ ನಡೆಸುವುದು ಬಹಳ ಕಷ್ಟವಾಯಿತಂತೆ. ಇದಕ್ಕೆ ಕಾರಣ ಅಭಿಮಾನಿಗಳು.
ಹೌದು, ಅಭಿಮಾನಿಗಳ ದಂಡೇ ಚಿತ್ರದ ಚಿತ್ರೀಕರಣ ನಡೆಯುವುದನ್ನು ನೋಡಲು ಸೇರಿದ್ದರಿಂದ ಕೊನೆಯ ಐದು ನಿಮಿಷದ ಚಿತ್ರದ ಚಿತ್ರೀಕರಣ ಅರ್ಧ ದಿನಕ್ಕೂ ಹೆಚ್ಚು ಕಾಲ ನಡೆಯಿತಂತೆ. ಆದಿತ್ಯ ಪಾಲಿಗೆ ಇದು ಜೀವನದಲ್ಲೇ ಅತ್ಯಂತ ಅವಿಸ್ಮರಣೀಯವಾದ ಘಟನೆಯಂತೆ. ಆದಿತ್ಯ ಹೇಳುವಂತೆ, ನನ್ನ ಜೀವನದಲ್ಲೇ ಅದೊಂದು ಅವಿಸ್ಮರಣೀಯ ಸಂದರ್ಭ. ಚಿತ್ರದ ಮಹತ್ವದ ಭಾಗದ ಚಿತ್ರೀಕರಣ ಅದು. ಜನನಿಬಿಡ ಪ್ರದೇಶ ಅದು. ಕಿಕ್ಕಿರಿದು ಜನ ಸೇರಿದ್ದ ತಾಣದಲ್ಲಿ ಕಾರ್ನರಿನಲ್ಲಿ ಒಂದು ಕೈನಲ್ಲಿ ಒಂದು ಹಾಗೂ ಇನ್ನೊಂದು ಸ್ಟಿಲ್ ಕ್ಯಾಮರಾ ಇಟ್ಟು ಚಿತ್ರೀಕರಣ ಮಾಡುವುದೇ ಕಷ್ಟವಾಯಿತು. ವಿಪರೀತ ಜನ ಸಂದಣಿಯಲ್ಲಿ ಸಾಗಿ ಹೋಗುವುದೇ ಕಷ್ಟವಾಯಿತು. ಅರ್ಧ ದಿನದ ಶೂಟಿಂಗ್ ನಂತರ ಎಲ್ಲರೂ ಸುಸ್ತೆದ್ದು ಹೋಗಿದ್ದರು. ಆದರೆ ಇಂದು ಎಡಿಟಿಂಗ್ ರೂಂನಲ್ಲಿ ಆ ದೃಶ್ಯ ನೋಡಿದಾಗ ಅದು ಮೂಡಿ ಬಂದ ರೀತಿ ನಿಜಕ್ಕೂ ಖುಷಿ ಕೊಟ್ಟಿತು. ಅಂದಿನ ಕಷ್ಟಕ್ಕೆ ಬೆಲೆ ಸಿಕ್ಕಿದೆ ಅನ್ನಿಸಿತು ಎನ್ನುತ್ತಾರೆ.
ರವಿ ಶ್ರೀವತ್ಸ್ ಚಿತ್ರದ ನಿರ್ದೇಶಕರು. ಇವರಂತೂ ಆದಿತ್ಯನನ್ನು ಹೊಗಳಿದ್ದೇ ಹೊಗಳಿದ್ದು. ಅಪರೂಪಕ್ಕೆ ಇಂಥದ್ದೊಂದು ಕ್ಯಾರೆಕ್ಟರ್ ಮೂಡಿ ಬಂದಿದೆ. ಅದ್ಬುತವಾಗಿ ನಟಿಸಿದ್ದಾರೆ ಆದಿತ್ಯ ಎಂದರು.
ಈ ಚಿತ್ರದಲ್ಲಿ ದೇವರಾಜ್ ಸಹ ಇದ್ದಾರೆ. ಭಾಗ 1ರಲ್ಲಿ ಆದಿತ್ಯನನ್ನ ಅರ್ಥಾತ್ ಡೆಡ್ಲಿ ಸೋಮನನ್ನು ಹೆಡೆಮುರಿ ಕಟ್ಟಿ ಜೈಲಿಗೆ ಅಟ್ಟಿದ್ದ ಖಡಕ್ ಪೊಲೀಸ್ ಅಧಿಕಾರಿ ಪಾತ್ರ ನಿರ್ವಹಿಸಿದ್ದ ದೇವರಾಜ್ ಈ ಭಾಗದಲ್ಲೂ ಪೊಲೀಸ್ ಅಧಿಕಾರಿಯಾಗಿಯೇ ಮಿಂಚಲಿದ್ದಾರಂತೆ. ಇವರಿಗೆ ನಾಯಕಿಯಾಗಿ ಸುಹಾಸಿನಿ ಇರುತ್ತಾರಂತೆ.
ಆದಿತ್ಯನಿಗೆ ನಾಯಕಿಯಾಗಿ ಮೇಘನಾ ನಟಿಸಲಿದ್ದಾರೆ. ಒಟ್ಟಾರೆ ಎಲ್ಲವೂ ಸರಿಯಾಗಿ ಆದರೆ ಚಿತ್ರ ಈ ತಿಂಗಳ ಕೊನೆ ಅಥವಾ ಮುಂದಿನ ತಿಂಗಳ ಮೊದಲ ವಾರದಲ್ಲಿ ತೆರೆ ಕಾಣುವ ಲಕ್ಷಣ ತೋರುತ್ತಿದೆ.