ಉಪೇಂದ್ರ ಜತೆ 'ಎ' ಚಿತ್ರ, ಶಿವರಾಜ್ ಕುಮಾರ್ ಜತೆ 'ಎಕೆ47' ಮಾಡಿ ನಂತರ ವಿಷ್ಣುವರ್ಧನ್ ಜತೆ 'ದೀಪಾವಳಿ'ಯಲ್ಲಿ ಮುಂದುವರೆದು ನಂತರ ಎಲ್ಲೋ ಮರೆಯಾದ ಚಾಂದನಿ ಈಗ ಉಪನ್ಯಾಸಕಿ (ಶಿಕ್ಷಕಿ)ಯಂತೆ!
ಹೌದು. 'ಸದ್ಯಕ್ಕೆ ಮಣಿಪಾಲ ವಿದ್ಯಾಸಂಸ್ಥೆಗಳ ಎಂಬತ್ತು ಎಂ.ಬಿ.ಎ. ವಿದ್ಯಾರ್ಥಿಗಳಿಗೆ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದೇನೆ. ಇದಕ್ಕೂ ಮೊದಲು ಸೋನಿ ಎಂಟರ್‌ಟೈನ್ಮೆಂಟ್ ಸಂಸ್ಥೆಯ ಹಂಚಿಕೆದಾರಳಾಗಿ ನೌಕರಿಯಲ್ಲಿದ್ದೆ. ದಿನದ ಹದಿನೆಂಟು ಗಂಟೆಗಳ ಕಾಲ ದುಡಿಯುತ್ತಿದ್ದೆ. ಕೊನೆ ಕೊನೆಗೆ ಅಪ್ಪ ಬೈಯ್ಯಲು ಶುರುವಿಟ್ಟುಕೊಂಡರು. ಪರ್ಸನಲ್ ಲೈಫೇ ಇಲ್ಲವಾಗಿ ಹೋಯಿತು. ಹೀಗಾಗಿ ಸೋನಿ ಸಂಸ್ಥೆಯನ್ನು ಬಿಟ್ಟು ಮಣಿಪಾಲ ಸಂಸ್ಥೆಯನ್ನು ಸೇರಿಕೊಂಡೆ.' ಎನ್ನುತ್ತಾರೆ ಚಾಂದಿನಿ.
ಇಷ್ಟು ದಿನ ಎಲ್ಲಿದ್ರಿ ಅಂದ್ರೆ, 'ದೀಪಾವಳಿ ಚಿತ್ರದಲ್ಲಿ ಕೆಟ್ಟ ಅನುಭವವಾಯಿತು. ಬೇಜಾರಾಯಿತು. ಮುಂಬಯಿಗೆ ಹೋದೆ. ಅಲ್ಲಿಂದ ಭೋಜ್ಪುರಿ ಚಿತ್ರರಂಗಕ್ಕೆ ಕಾಲಿಟ್ಟೆ. ಅತ್ಯುತ್ತಮ ಅನ್ನಬಹುದಾದ ಅವಕಾಶ ಸಿಕ್ಕಿತು. ನಾನು ನಟಿಸಿದ ಆ ಚಿತ್ರ ಭರ್ತಿ ಒಂದು ವರ್ಷ ಓಡಿತು. ಭೋಜ್ಪುರಿ ಚಿತ್ರರಂಗಕ್ಕೆ ಲೈಫ್ ತಂದುಕೊಟ್ಟ ಚಿತ್ರವದು. ನಂತರ ಗುಜರಾತಿ ಚಿತ್ರವೊಂದರಲ್ಲಿ ನಟಿಸಿದೆ. ಹದಿನಾರರಿಂದ ಅರುವತ್ತರ ಮುದುಕಿವರೆಗಿನ ಪಾತ್ರವದು. ಈ ಚಿತ್ರ ಕೂಡ ದಾಖಲೆ ಸ್ಥಾಪಿಸಿತು. ಕೈ ತುಂಬಾ ಅವಕಾಶಗಳು ಬಂದವು. ಆದರೆ ನಾನು ಆಸಕ್ತಿ ಕಳೆದುಕೊಂಡು ಬಿಟ್ಟೆ ಎನ್ನುತ್ತಾರೆ ಈ ಚಾಂದಿನಿ.
ಇಂಥ ಚಾಂದಿನಿಗೆ ತಮಿಳು ಹಾಗೂ ಕನ್ನಡ ಚಿತ್ರಗಳಲ್ಲಿ ನಟಿಸುವ ಆಸೆ ಇನ್ನೂ ಇದೆ. ಆದರೆ ಸರಿಯಾದ ವಿಳಾಸವಿಲ್ಲದ ನನ್ನನ್ನು ಕನ್ನಡ ಚಿತ್ರರಂಗ ಗುರುತಿಸುವುದಾದರೂ ಹೇಗೆ? ಎನ್ನುವ ಕೊರಗೂ ಕೂಡಾ ಚಾಂದಿನಿಯದು. ಆಗಾಗ ಬೆಂಗಳೂರಿಗೆ ಬಂದು ಹೋಗುತ್ತಿದ್ದೆ. ಕೆಲವೇ ಕೆಲವು ಪತ್ರಕರ್ತ ಮಿತ್ರರ ಜತೆ ಮಾತಾಡುತ್ತಿದ್ದೆ. ಮತ್ತೆ ಮುಂಬಯಿ ಸೇರಿಕೊಳ್ಳುತ್ತಿದ್ದೆ' ಎನ್ನುತ್ತಾರೆ.
ಹಾಗಾದರೆ ಮದ್ವೆ ಗಿದ್ವೆ ಕಥೆ ಇಲ್ವೇ ಎಂದರೆ, ಮದುವೆ ಮಾಡಿಕೊಳ್ಳುವ ಆಸೆಯಂತೂ ಇದ್ದೇ ಇದೆಯಂತೆ. ಆದರೆ ಅದಕ್ಕೂ ಮೊದಲು ಮಹಾಬಲಿಪುರಂನಲ್ಲಿರುವ ನಮ್ಮ ಫಾರ್ಮ್ ಹೌಸನ್ನು ಮಾರಿ ಬೆಂಗಳೂರಿನಲ್ಲಿ ಸೆಟ್ಲ್ ಆಗಬೇಕೆನ್ನುವ ಯೋಚನೆಯಿದೆಯಂತೆ.
ಅಂದ ಹಾಗೆ, ಈ ಚಾಂದಿನಿ ಕೇವಲ ನಟಿ ಮಾತ್ರ ಅಲ್ಲ. ಕೃಷಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರೌಢ ಪ್ರಬಂಧ ಮಂಡಿಸಿ ಮೈಸೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದುಕೊಂಡು 'ಡಾ. ಚಾಂದಿನಿ' ಕೂಡ ಆಗಿದ್ದಾರೆ. ಚಿನ್ನದ ಪದಕದ ವಿಜೇತೆ ಕೂಡಾ. ಅಬ್ಬಬ್ಬಾ ಚಾಂದಿನಿ!!!