ಕಲಾತ್ಮಕ ಚಿತ್ರವನ್ನು ಜನ ನೋಡುತ್ತಿಲ್ಲ ಎನ್ನುವ ಆರೋಪದ ಮಾತುಗಳೇ ಇದುವರೆಗೂ ಕೇಳುತ್ತಿದ್ದ ನಾಗರಿಕರಿಗೆ ಮೊನ್ನೆ ಸುಚಿತ್ರ ಫಿಲಂ ಸೊಸೈಟಿಯಲ್ಲಿ ವಿಭಿನ್ನ ಮಾತು ಕೇಳಿ ಬಂತು. ಅಂದು ಭಾರತೀಯ ಚಿತ್ರರಂಗದಲ್ಲಿ ಹೊಸ ಭಾಷ್ಯವನ್ನೇ ಬರೆದ ಖ್ಯಾತ ಚಿತ್ರ ನಿರ್ದೇಶಕ ಶ್ಯಾಮ್ ಬೆನೆಗಲ್ ಈ ಬಗ್ಗೆ ಮಾತನಾಡಿದರು. ಅವರ ಪ್ರಕಾರ ಚಿತ್ರ ನಿರ್ಮಾಣದಲ್ಲೇ ಒಂದಿಷ್ಟು ಬದಲಾವಣೆ ಆಗಬೇಕಿದೆಯಂತೆ.
ಹೌದು, ಕಲಾತ್ಮಕ ಚಿತ್ರ ಗೆಲ್ಲುತ್ತಿಲ್ಲ, ಜನ ನೋಡುತ್ತಿಲ್ಲ ಅನ್ನುವುದಕ್ಕಿಂತ ಇದನ್ನು ನೋಡುವ ರೀತಿ ಸಿದ್ಧಪಡಿಸುವ ಕಾರ್ಯ ಆಗುತ್ತಿಲ್ಲ ಎಂದು ಅವರು ವಿಷಾದ ವ್ಯಕ್ತಪಡಿಸಿದರು. ಈ ಚಿತ್ರವನ್ನು ಕಲಾತ್ಮಕ ಎಂಬ ಚೌಕಟ್ಟಿನಿಂದ ಆಚೆ ಬಂದು ನಿರ್ಮಿಸಬೇಕು ಎನ್ನುವುದು ಅವರ ಸಲಹೆ ಆಗಿತ್ತು. ಜಾಹೀರಾತು ಜನರನ್ನು ಹೇಗೆ ಸೆಳೆಯುತ್ತದೆಯೋ, ಅದೇ ರೀತಿ ಕಲಾತ್ಮಕ ಚಿತ್ರಗಳು ಜನರನ್ನು ಸೆಳೆಯುವ ರೀತಿ ನಿರ್ಮಿಸುವ ಕಾರ್ಯ ಆಗಬೇಕು. ಒಂದು ವಿಶೇಷ ಆಕರ್ಷಣೆ ಈ ಚಿತ್ರದಲ್ಲಿ ಇರಬೇಕು ಎಂದರು.
ಇದೇ ಸಂದರ್ಭದಲ್ಲಿ ಅವರು ಸಾಕಷ್ಟು ಪ್ರಶಸ್ತಿ ಪುರಸ್ಕೃತರ ಚಿತ್ರಗಳು ಇದುವರೆಗೂ ಬಿಡುಗಡೆ ಆಗದಿರುವ ಬಗ್ಗೆ ಕೊಂಚ ಅಸಮಾಧಾನ ವ್ಯಕ್ತಪಡಿಸಿದರು. ಇವೆಲ್ಲಾ ಬಿಡುಗಡೆ ಆದರೆ, ಜನರಿಗೆ ಇನ್ನಷ್ಟು ಕಲಾತ್ಮಕತೆಯ ವೈಶಾಲ್ಯದ ಅರಿವು ಆಗಲಿದೆ ಎಂದರು. ಇವರ ಮಾತನ್ನು ಕನ್ನಡದ ಹಿರಿಯ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿ ಹಾಗೂ ಸಾಹಿತಿ ಯು.ಆರ್. ಅನಂತಮೂರ್ತಿ ಸಹ ಬೆಂಬಲಿಸಿದರು.
ಒಟ್ಟಾರೆ ಕಲಾತ್ಮಕ ಚಿತ್ರವನ್ನು ಜನ ನೋಡುವಂತೆ ಸಿದ್ಧಪಡಿಸಬೇಕು. ಇದನ್ನು ಸಿದ್ಧಪಡಿಸುವವರ ಮನೋ ಅಭಿಲಾಷೆ ಬದಲಾಗಬೇಕು ಎನ್ನುವ ಗಟ್ಟಿ ಮಾತನ್ನು ಬೆನೆಗಲ್ ಆಡಿದ್ದಾರೆ. ಇದಕ್ಕೆ ಮುಂದಿನ ದಿನಗಳಲ್ಲಿ ಎಷ್ಟು ಬೆಲೆ ಸಿಗುವುದೋ ಕಾದು ನೋಡಬೇಕಿದೆ.