ನಾಯಕ ಚಿತ್ರದ ಬಗ್ಗೆ ನೀವು ಈಗಾಗಲೇ ಕೇಳಿರುತ್ತೀರಿ. ಇದೊಂದು ಸಾಕಷ್ಟು ನಿರೀಕ್ಷೆಯ ಚಿತ್ರ. ಹೊಸ ಚಿತ್ರಗಳ ಸಾಲು ಸಾಲು ಸೋಲಿನ ನಂತರ ಇದಾದರೂ ಗೆದ್ದರೆ ಸಾಕು ಎಂಬ ಹರಕೆ, ಹಾರೈಕೆ ಹಲವರದು.
ಇದೇ ಮಾತು ಚಿತ್ರದ ದ್ವನಿ ಸುರುಳಿ ಬಿಡುಗಡೆ ಸಂದರ್ಭದಲ್ಲೂ ಕೇಳಿಬಂತು. ಎಲ್ಲರೂ ಸಾಕಷ್ಟು ನಿರೀಕ್ಷೆಯಲ್ಲಿದ್ದು, ಈ ಚಿತ್ರ ಹಾಡುಗಳಂದಲೇ ಸಾಕಷ್ಟು ಜನಪ್ರಿಯತೆ ಪಡೆಯಲಿದೆ ಎನ್ನಲಾಗುತ್ತಿದೆ. ಅಲ್ಲದೇ ಚಿತ್ರವನ್ನು ಗೆಲ್ಲಿಸುವಲ್ಲಿ ಇದರ ಪಾತ್ರವೂ ಪ್ರಮುಖ ಅನ್ನಲಾಗುತ್ತಿದೆ.
ಹೌದು. ಚಿತ್ರದಲ್ಲಿ ಐದು ಹಾಡುಗಳಿವೆಯಂತೆ. ಇವೆಲ್ಲವೂ ಸಿನಿಮಾಗೋಸ್ಕರ ಮಾಡಿದ ಹಾಡುಗಳು ಎನ್ನುವುದು ನಿರ್ದೇಶಕ ಪಿ.ಸಿ. ಶೇಖರ್ ಮಾತು. ಇವರ ಪ್ರಕಾರ ಕಥೆಯ ಒಳಗೆ ಹಾಡುಗಳು ಸಾಗಿ ಹೋಗಬೇಕೇ ಹೊರತು, ಹಾಡಿಗಾಗಿ ಚಿತ್ರ ಆಗಬಾರದು. ಈ ಚಿತ್ರದಲ್ಲಿ ಹಾಡುಗಳು ಎಲ್ಲರಬೇಕೋ, ಹೇಗಿರಬೇಕೋ ಹಾಗೆಯೇ ಇವೆ. ಎಲ್ಲೂ ಅನಗತ್ಯ ಅನ್ನಿಸುವುದಿಲ್ಲ. ಚಿತ್ರ ಬಹುತೇಕ ಸಿದ್ಧವಾಗಿದ್ದು, ಸದ್ಯವೇ ಬಿಡುಗಡೆ ಆಗಲಿದೆ ಅನ್ನುತ್ತಾರೆ.
ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ಪ್ರದೀಪ್ ಕುಮಾರ್ ಸಹ 'ಭೂಮಿ ಸುತ್ತು...' ಹಾಗೂ 'ಜೀವನವೇ ಜೀವ...' ಎಂಬ ಎರಡು ಹಾಡನ್ನು ಬರೆದಿದ್ದಾರೆ. ಇದು ಸುಖ ಹಾಗೂ ದುಃಖದ ಸಂಕೇತ. ಈ ಹಾಡನ್ನು ಕ್ರಿಶ್ ಹಾಗೂ ಜೈ ಹೋ ಹಾಡಿನ ಖ್ಯಾತಿಯ ವಿಜಯ್ ಪ್ರಕಾಶ್ ಹಾಡಿದ್ದಾರೆ. ನವೀನ್ ಚಿತ್ರದ ನಾಯಕ, ರಾಗಿಣಿ ನಾಯಕಿ. ತಾಂತ್ರಿಕವಾಗಿ ಸಹ ಚಿತ್ರ ಅತ್ಯುತ್ತಮವಾಗಿದ್ದು, ಇದೊಂದು ಡಿಫರೆಂಟ್ ಚಿತ್ರ. ಗೆದ್ದೇ ಗೆಲ್ಲುತ್ತದೆ ಎನ್ನುವ ವಿಶ್ವಾಸವನ್ನೂ ವ್ಯಕ್ತಪಡಿಸುತ್ತಿದೆ ಚಿತ್ರತಂಡ.