ನಮ್ಮ ಬುಲೆಟ್ ಪ್ರಕಾಶ್ ನಗುತ್ತಿದ್ದಾರೆ. ಗತ ಜೀವನದಲ್ಲಿ ಮನೆ ಕಳೆದುಕೊಳ್ಳುವ ಸ್ಥಿತಿಗೆ ಬಂದಿದ್ದ ಈ ನಟ, ಇಂದು ಚಿತ್ರರಂಗ ನೀಡಿದ ಆಸರೆಯಿಂದ ಬೆಳೆದುದರ ಬಗ್ಗೆ ಅಭಿಮಾನದಿಂದ ಹೇಳಿಕೊಳ್ಳುತ್ತಾರೆ.
ಹೌದು. ಕೌನ್ಸಿಲರ್ ಆಗಬೇಕೆಂಬ ಹುಚ್ಚಿಗೆ ಮೂರು ಬಾರಿ ಚುನಾವಣೆಗೆ ಸ್ಪರ್ಧಿಸಿ ಸೋಲುಂಡಿದ್ದ ಈ ಭಾರೀ ಗಾತ್ರದ ನಟ, ಅಂದು ಆದ ನಷ್ಟಕ್ಕೆ ಮನೆಯನ್ನೇ ಮಾರುವ ಸ್ಥಿತಿಗೆ ಬಂದಿದ್ದರು. ಆಗ ಸ್ನೇಹಿತರಾದ ಮಣಿ ಹಾಗೂ ಮಹೇಶ್ ಬಾಬು ಇವರನ್ನು ಚಿತ್ರರಂಗಕ್ಕೆ ಎಳೆತಂದರು. ನಂತರ ನಡೆದದ್ದು ಎಲ್ಲಾ ಗೊತ್ತೇ ಇದೆ. ಇಂದು ಚಿತ್ರ ನಿರ್ಮಿಸುವ ಮೂಲಕ ಒಬ್ಬ ನಟನ ಮುಂದುವರಿದ ಭಾಗವಾಗಿಯೂ ಐತಲಕ್ಕಡಿಯಲ್ಲಿ ಗೆದ್ದಿದ್ದಾರೆ.
ಕಾಲೇಜು ದಿನಗಳಲ್ಲೂ ಇವರು ತುಂಟತನಕ್ಕೆ ಪ್ರಸಿದ್ಧರಂತೆ. ಇದರಿಂದ ಇವರ ಓದಿನ ಮೇಲೂ ಇದು ಪರಿಣಾಮ ಬೀರಿತು. ಡಿಪ್ಲೊಮಾ ಇನ್ ಎಲೆಕ್ಟ್ರಾನಿಕ್ಸ್‌ನ ಮೊದಲ ವರ್ಷದ ಕೊನೆಗೆ ಇವರ ಕಾಲೇಜು ಜೀವನ ಖತಂ ಆಯಿತು. ಅದಕ್ಕಿಂತ ಕಾಲೇಜು ಇವರನ್ನು ಆಚೆ ದಬ್ಬಿತ್ತು ಅನ್ನುವುದು ಸೂಕ್ತ. ಕಾರಣ ವಿವರಿಸಬೇಕಿಲ್ಲ, ಇರು ಎಲ್ಲಾ 13 ವಿಷಯದಲ್ಲಿ ಫೇಲ್ ಆಗಿದ್ದರು! ಜತೆಗೆ ತುಂಟತನ ಬೇರೆ.
ನಂತರ ಕಾಲಿರಿಸಿದ್ದು ರಾಜಕೀಯಕ್ಕೆ. ಇಲ್ಲೂ ಹೊಡೆತದ ಮೇಲೆ ಹೊಡೆತ ಬಿತ್ತು. ಸೋತು ಸುಣ್ಣವಾದರು. ಪತ್ನಿ ಮಂಜುಳಾ, ಮಕ್ಕಳಾದ ಮೋನಿಕಾ, ವರ್ಷಿಣಿ ಹಾಗೂ ರಕ್ಷಕ್ ಸೇನಾರ ಹೊಣೆ ಬೇರೆ ಇತ್ತು. ಇದರಿಂದ ಸಕಾಲಕ್ಕೆ ಸ್ನೇಹಿತರು ತೋರಿಸಿದ ಚಿತ್ರರಂಗದ ಬಂಡಿ ಹತ್ತಿದರು. ಬಹುತೇಕ ಗುರಿ ತಲುಪಿದ್ದಾರೆ. ಜತೆಗೆ ಸಾಲಮುಕ್ತರಾಗಿದ್ದಾರೆ.
ಇನ್ನು ಇವರು ಚಿತ್ರರಂಗಕ್ಕೆ ಹೊಸಬರೇನು ಅಲ್ಲ. ರವಿಚಂದ್ರನ್ರ ಶಾಂತಿಕ್ರಾಂತಿಯಲ್ಲಿ ನಟಿಸಿದ್ದರು. ಆದರೆ, ಯಾರಿಗೂ ಗುರುತು ಸಿಗಲು ಸಾಧ್ಯವಿಲ್ಲ. ಏಕೆಂದರೆ ಒಂದು ಹಾಡಿನಲ್ಲಿ ಬಂದ 300 ಮಕ್ಕಳಲ್ಲಿ ಇವರೂ ಒಬ್ಬರಾಗಿದ್ದರು. ಇರಲಿ, ಇಂದು ಒಬ್ಬ ನಟ, ನಿರ್ಮಾಪಕರಾಗಿ ಸೈ ಅನ್ನಿಸಿಕೊಂಡಿದ್ದಾರೆ. ಆಲ್ ದಿ ಬೆಸ್ಟ್.