ಕನ್ನಡದ ಪಾಲಿಗೆ ವೀಡಿಯೊ ಆಲ್ಬಂಗಳು ಬಹಳ ಕಡಿಮೆಯೇ. ಆಗೊಂದು, ಈಗೊಂದು ಬಂದರೆ ಹೆಚ್ಚು. ಈ ನಡುವೆ ಪ್ರೀತಿಸುವ ಮನಸ್ಸುಗಳಿಗಾಗಿ 'ಸನಿಹ' ಬಂದಿದೆ.
ರಘು ಎಂಬುವರು ಈ ಆಲ್ಬಂ ಸಿದ್ಧಪಡಿಸಿದ್ದು, ತಮ್ಮದೇ ಆದ ಸ್ನೇಹಿತರ ಬಳಗ ಕಟ್ಟಿಕೊಂಡು ಈ ಒಂದು ಸಾಹಸ ಮಾಡಿ ಮುಗಿಸಿದ್ದಾರೆ. ತಮ್ಮ ತಂಡಕ್ಕೆ ಟ್ರೆಂಡ್ ಸೆಟ್ಟರ್ ಎಂಬ ಹೆಸರನ್ನು ಸಹ ಇರಿಸಿಕೊಂಡಿರುವ ಇವರು ಆಲ್ಬಂ ಮೂಲಕ ಒಟ್ಟು 10 ಗೀತೆಗಳನ್ನು ಹೊರತಂದಿದ್ದಾರೆ.
ಕೇಳಲು ಸುಮಧುರ ಎನಿಸುವ, ನೋಡಲು ಸಹ ಮುದ್ದಾಗಿರುವ ವೀಡಿಯೊ ಆಲ್ಬಂ ಇದಾಗಿದೆ. ಐದು ಹಾಡುಗಳಂತೂ ತೀರಾ ಅತ್ಯುತ್ತಮ ಎಂಬ ಮಾತು ಕೇಳಿ ಬರುತ್ತಿದೆ. ಚಿತ್ರೀಕರಣ ದೇವದುರ್ಗ, ಹೊನ್ನಾವರ, ಕೆಮ್ಮಣ್ಣುಗುಂಡಿ, ಚಿಕ್ಕಮಗಳೂರು, ಬಾಬಾ ಬುಡನಗಿರಿ, ಬೆಂಗಳೂರು ಸೇರಿದಂತೆ ಹಲವು ಕಡೆ ನಡೆದಿದೆ.
ಆಲ್ಬಂಗೆ ಹಾಡುಗಳನ್ನು ರವಿ ಆರ್. ಗಿರಣಿ, ಶಶಿಧರ್ ಶೆಟ್ಟರ್, ವೀರೇಶ್ ಹಾಗೂ ರವಿ ನಿರ್ದೇಶಿಸಿದ್ದಾರೆ. ಅರುಣ್, ಸ್ಮಿತಾ, ರವಿ, ಸಂಗೀತಾ, ಮಧುಸೂದನ್, ಜಾಸ್ಮಿನ್, ರಘು, ಶ್ರುತಿ, ರಾಜು ಹಾಗೂ ಸ್ವಾತಿ ಅಭಿನಯಿಸಿದ್ದಾರೆ. ಚಂದ್ರಮಯೂರ್ ಪ್ರಭು, ಕಿರಣ್, ಬಿ.ಸಿ. ಹಾಗೂ ರವಿ ನೃತ್ಯ ನಿರ್ದೇಶನ ಮಾಡಿದ್ದಾರೆ. ಸುರೇಶ್ ಬೈರಸಂದ್ರ, ಸೂರ್ಯಕಾಂತ್ ಹೊನ್ನಳ್ಳಿ ಹಾಗೂ ಶ್ರೀನಿವಾಸ್ ಛಾಯಾಗ್ರಹಣ ಇದೆ. ಎ.ಎಂ. ನೀಲ್ ಸಂಗೀತ ನೀಡಿದ್ದಾರೆ.