ಬಿಡದಿಯ ನಿತ್ಯಾನಂದ ಮಠದ ಕಾಮಿಸ್ವಾಮಿಗೆ ನ್ಯಾಯಾಲಯ ಯಾವ ಶಿಕ್ಷೆ ಕೊಡುತ್ತದೋ ಗೊತ್ತಿಲ್ಲ. ಸಮಾಜದಲ್ಲಿ ಸರ್ವ ರೀತಿಯಲ್ಲೂ ಮಾನಭಂಗಕ್ಕೆ ಒಳಗಾಗಿರುವ ಸ್ವಾಮಿಯನ್ನು ಈಗ ಚಿತ್ರರಂಗವೂ ಜಾಲಾಡಿಸಲು ಆರಂಭಿಸಿದೆ.
ಸಾದು ಕೋಕಿಲಾ ಈಗಾಗಲೇ 'ಸ್ವಾಮೀಜಿ' ಹೆಸರಿನ ಚಿತ್ರ ಮಾಡಲು ಮುಂದಾಗಿದ್ದಾರೆ. ಅದರ ಬೆನ್ನಲ್ಲೇ ಈಗ ನಟ ರಮೇಶ್ ಕೂಡಾ ನಿತ್ಯಾನಂದರಾಗಲು ಹೊರಟಿದ್ದಾರಂತೆ. ನಿತ್ಯಾನಂದರನ್ನೇ ಆಧರಿಸಿ ಸಿದ್ಧವಾಗಿರುವ ಚಿತ್ರವೊಂದರಲ್ಲಿ ಅಭಿನಯಿಸುತ್ತಿದ್ದಾರಂತೆ. ನಿತ್ಯಾನಂದರ ಲೀಲೆಯನ್ನು ಆಧಾರವಾಗಿಟ್ಟುಕೊಂಡು ಈ ಚಿತ್ರ ಸಿದ್ಧವಾಗಲಿದೆ.
ಈ ಚಿತ್ರಕ್ಕಾಗಿ ಗಂಭೀರವಾಗಿ ತಲೆಕೆಡಿಸಿಕೊಂಡಿರುವ ರಮೇಶ್ ಚಿತ್ರದಲ್ಲಿ ಅತ್ಯುತ್ತಮ ಅಭಿನಯ ನೀಡುವುದಾಗಿ ಹೇಳಿಕೊಂಡಿದ್ದಾರಂತೆ. ಗಜೇಂದ್ರಾಚಾರ್ ಈ ಚಿತ್ರದ ನಿರ್ದೇಶಕರು. ಈ ಹಿಂದೆ ಸಮಾಗಮ ಎಂಬ ಹೆಸರಿನ ಚಿತ್ರ ತಂದಿದ್ದ ಅಂದಾನಿ ಗೌಡ ಇದರ ನಿರ್ಮಾಪಕರು. ಗಜೇಂದ್ರಾಚಾರ್ ನಿರ್ದೇಶನದ ಜತೆ ನಿರ್ಮಾಣದಲ್ಲೂ ಕೈಜೋಡಿಸಲಿದ್ದಾರೆ ಎಂಬ ಸುದ್ದಿ ಇದೆ. ವಿಚಿತ್ರ ಅಂದರೆ ಈ ಚಿತ್ರದಲ್ಲಿ ರಮೇಶ್ ಪಾತ್ರ ಕೊಂಚ ನೆಗೆಟಿವ್ ಅಂತೆ. ಅಮೃತವರ್ಷಿಣಿ ನಂತರ ಇವರು ಆ ಮಾದರಿಯ ಪಾತ್ರದಲ್ಲಿ ನಟಿಸಿರಲಿಲ್ಲ. ಚಿತ್ರಕ್ಕಿನ್ನೂ ಹೆಸರಿಡುವ ಕಾರ್ಯ ಆಗಿಲ್ಲ. ಉಳಿದ ಪಾತ್ರವರ್ಗವೂ ಅಂತಿಮವಾಗಬೇಕಷ್ಟೆ.
ಸದ್ಯ ರಮೇಶ್ ಅರವಿಂದ್ ಕೊಂಚ ಬ್ಯುಸಿ ಆಗಿದ್ದಾರೆ. ರಂಗೀಲಾ ಅನ್ನುವ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದಕ್ಕೆ ಶ್ರೀಹರಿಕಥೆ ಚಿತ್ರಕ್ಕೆ ಸಂಭಾಷಣೆ ಬರೆದಿರುವ ಪ್ರಸನ್ನ ಅವರೇ ನಿರ್ದೇಶಕರು. ಪ್ರೀತಿಯಿಂದ ರಮೇಶ್ ಚಿತ್ರ ನಿರ್ಮಿಸಿದ್ದ ಕಾನ್ಪಿಡೆಂಟ್ ಸಮೂಹವೇ ಇದನ್ನೂ ನಿರ್ಮಿಸುತ್ತಿದೆ. ಇದರ ಜತೆ ಕೆ. ಮಂಜು ನಿರ್ಮಾಣದ ಒಂದು ಚಿತ್ರವನ್ನು ಸಹ ರಮೇಶ್ ಒಪ್ಪಿಕೊಂಡಿದ್ದಾರಂತೆ. ಈ ಮೂರೂ ಚಿತ್ರಗಳೂ ಸೆಟ್ಟೇರುವ ಸಾಧ್ಯತೆ ಇದ್ದು, ರಂಗೀಲಾಗೆ ಮೊದಲ ಪ್ರಾಶಸ್ತ್ಯ ಸಿಗಬಹುದು ಎನ್ನಲಾಗುತ್ತಿದೆ.