ಕೆಂಪಾದ ಕಣ್ಣು, ದಪ್ಪನೆ ಮೀಸೆ, ಭಾರೀ ದೇಹ, ಗಂಭೀರ ಮುಖಮುದ್ರೆ ಕಂಡ ತಕ್ಷಣ ಚಿಕ್ಕ ಮಗುವಾದರೂ ಉತ್ತರಿಸುತ್ತದೆ ಅಂಬರೀಶ್ ಅಂತ. ಹೌದು. ಇದು 2010ರ ಚಿತ್ರಣ. ಸದ್ಯ ವೀರ ಪರಂಪರೆಗಾಗಿ ಇವರು ಹೊಂದಿರುವ ಗೆಟಪ್ ಅಂತದ್ದು. ಒಬ್ಬ ಪಾಳೇಗಾರನ ಪಾತ್ರದಲ್ಲಿ ಇವರು ಕಾಣಿಸಿಕೊಳ್ಳಲಿದ್ದಾರಂತೆ.
ಎಸ್. ನಾರಾಯಣ್ ನಿರ್ದೇಶನದ ಈ ಚಿತ್ರಕ್ಕಾಗಿ ಅಂಬಿ ಈಗ ತಮ್ಮ ಗೆಟಪ್ ಬದಲಾಯಿಸಿದ್ದಾರೆ. ದಪ್ಪನೆ ಮೀಸೆ, ಗಂಭೀರ ಮುಖಮುದ್ರೆಯೊಂದಿಗೆ ಕಂಗೊಳಿಸುತ್ತಿದ್ದಾರೆ. ಚಿತ್ರದ ಟ್ರೇಲರ್‌ಗಾಗಿ ಇವರು ನೀಡಿದ ಫೋಸ್ ಪಾತ್ರದ ಗಂಭೀರತೆಯನ್ನು ಸೂಚಿಸುತ್ತದೆ. ಚಿತ್ರದ ಚಿತ್ರೀಕರಣ ಭರದಿಂದ ಸಾಗಿದ್ದು, ಅಂಬರೀಷ್ ಅವರ ವಿಭಿನ್ನ ಮುಖವನ್ನು ಕಾಣುವ ದಿನ ದೂರದಲ್ಲಿಲ್ಲ.
ಸದ್ಯ ಕನ್ನಡದ ಹಿರಿಯ ತಲೆಗಳಲ್ಲಿ ಒಬ್ಬರಾಗಿರುವ ಇವರ ಮೇಲೆ ಸಾಕಷ್ಟು ಜವಾಬ್ದಾರಿಗಳಿವೆ. ಆತ್ಮೀಯ ಸ್ನೇಹಿತ ವಿಷ್ಣುವರ್ಧನ್ ಅವರ ಅಗಲಿಕೆ ನಂತರವಂತೂ ಸಾಕಷ್ಟು ಖಿನ್ನರಾಗಿದ್ದ ಅಂಬಿ ಇದೀಗ ತಮ್ಮನ್ನು ತಾವು ಸುಧಾರಿಸಿಕೊಂಡು ವೀರ ಪರಂಪರೆ ಮಾಡುತ್ತಿದ್ದಾರೆ.
ಯುವ ನಟರ ಅಬ್ಬರದ ನಡುವೆ ಊರ ಗೌಡರ ಗತ್ತಿನ ಪಾತ್ರವನ್ನು ಪ್ರತಿನಿಧಿಸುವ ಇವರ ಈ ಚಿತ್ರದ ಪಾತ್ರ ನಿಜಕ್ಕೂ ಸಾಕಷ್ಟು ಚರ್ಚೆಗೆ ಗ್ರಾಸವಾಗುತ್ತಿದೆ. ಪ್ರೀತಿ, ಮಚ್ಚುಗಳ ಜನಪ್ರಿಯತೆ ನಡುವೆ ಪಾಳೆಗಾರಿಕೆ ಪಾತ್ರ ಎದ್ದು ನಿಲ್ಲುವುದೇ ಎಂಬ ಪ್ರಶ್ನೆಯನ್ನೂ ಹಲವರು ಮಾಡುತ್ತಿದ್ದಾರೆ. ಅದೇನೇ ಇರಲಿ ಸದ್ಯ ಚಿತ್ರ ಬದುಕಿನಲ್ಲಿ ತಮ್ಮದೇ ಆದ ನೆಲೆ ಕಂಡುಕೊಂಡಿರುವ ಅಂಬರೀಶ್‌ಗೆ ಈ ಪಾತ್ರ ನಿಜಕ್ಕೂ ಪ್ರತಿಷ್ಠೆಯದ್ದಾಗಿರುವುದು ಸುಳ್ಳಲ್ಲ.