ಸೋಲಿನ ಸುಳಿಯಲ್ಲಿ ಮುಂಗಾರು ಹುಡುಗಿ ಅನ್ನುವ ತಲೆಬರಹ ತಮ್ಮ ಮುದ್ದು ಮುದ್ದು ಕನ್ನಡ ಮಾತನಾಡುವ ನಟಿ ಪೂಜಾ ಗಾಂಧಿಗೆ ಕರೆಕ್ಟಾಗಿಯೇ ಸೂಟ್ ಆಗುತ್ತದೆ. ಯಾಕೆಂದರೆ ಸಾಲು ಸಾಲು ಚಿತ್ರಗಳನ್ನು ಒಪ್ಪಿಕೊಂಡಿದ್ದೇ ಈ ಸೋಲಿಗೆ ಕಾರಣವಾ ಅಂತ ಹುಡುಕಿ ಹೊರಟಾಗ ಎದುರಾದ ನಟಿ ನೀಡಿದ ಉತ್ತರ ಇಲ್ಲಿದೆ.
ಮಹರ್ಷಿ, ಜನುಮದ ಗೆಳತಿ, ಟಾಟಾ ಬಿರ್ಲಾ, ಕೋಡಗಾನ ಕೋಳಿ ನುಂಗಿತ್ತಾ, ಹುಚ್ಚಿ, ಇನಿಯ, ಮಿನುಗು, ಗೋಕುಲ, ಅನು, ನಿನಗಾಗಿ ಕಾದಿರುವೆ, ಶ್ರೀ ಹರಿಕಥೆ... ಈ ರೀತಿ ಸಾಲು ಸೋಲುಗಳಿಗೆ ಯಾರಮ್ಮಾ ಕಾರಣ ಅಂತ ಕೇಳಿದರೆ, ಎಲ್ಲರಂತೆ ಅವರೂ ಕೂಡಾ ಕೈ ತಿರುಗಿಸಿ ಗೊತ್ತಿಲ್ಲ ಅನ್ನುತ್ತಾರೆ.
ತೀರಾ ಕೆಣಕಿದಾಗ ಉಳಿದ ಚಿತ್ರಗಳ ಬಗ್ಗೆ ಈಗ ಚರ್ಚೆ ಬೇಕಾಗಿಲ್ಲ. ರಾಣಿ ಮಹಾರಾಣಿ ಕಥೆ ಕೇಳಿದೆ. ಇಷ್ಟ ಆಯ್ತು. ಒಪ್ಪಿಕೊಂಡೆ ಎನ್ನುತ್ತಾರೆ. ಚಿತ್ರ ತೋಪಾಗಿರುವಲ್ಲಿ ನಾನು ಕಾರಣಳಲ್ಲ. ಕಥೆ ಕೇಳೋವಾಗ ಚೆನ್ನಾಗೇ ಹೇಳ್ತಾರೆ. ಕೊನೆಗೆ ಸಿನಿಮಾ ನೋಡಿದಾಗ ಅದು ಕಥೆಯಾಗಿಯೇ ಇರುತ್ತದೆ. ಸಿನಿಮಾ ಆಗಿರುವುದಿಲ್ಲ ಎನ್ನುವ ಹೊಸ ಬಾಂಬ್ ಸಿಡಿಸುತ್ತಾರೆ.
ರಾಣಿ ಮಹಾರಾಣಿ ಚಿತ್ರವನ್ನು ಈ ಹಿಂದೆ ಮಾಲಾಶ್ರೀ ನಟಿಸಿ ಗೆಲ್ಲಿಸಿದ್ದರು. ಇದೀಗ ಅದೇ ಚಿತ್ರ ರಿಪೀಟ್ ಅಗುತ್ತಿದೆ. ಆದರೆ ಹೆಸರಿನಲ್ಲಿ ಕೊಂಚ ವ್ಯತ್ಯಾಸವಿದೆ. ಈ ಬಾರಿ ಅದು ನಾ ರಾಣಿ ನೀ ಮಹಾರಾಣಿ ಆಗಿದೆ. ಕನ್ನಡವೂ ಸೇರಿದಂತೆ ಹಲವು ಭಾಷೆಯಲ್ಲಿ ಈ ಚಿತ್ರ ಸಾಕಷ್ಟು ಸಾರಿ ರಿಪೀಟ್ ಅಗಿದೆ. ಆದರೂ ಇಲ್ಲೊಂದು ಹೊಸ ಯತ್ನ. ಇದರಲ್ಲಿ ಗೆಲ್ಲುವುದು ಈಗ ಪೂಜಾ ಮುಂದಿರುವ ಸವಾಲು. ಏನೇ ಸೋಲು ಸಾಲು ಸಾಲಾಗಿ ಬಂದರೂ ಪೂಜಾ ಅವಕಾಶಕ್ಕೇನೂ ಪೆಟ್ಟು ಬಿದ್ದಿಲ್ಲ. ಏನೇ ಇರಲಿ, ಮುಂದಿನ ಗೆಲುವುಗಳಿಗೆ ಈಗಲೇ ಶುಭ ಹಾರೈಸಿ ಬಿಡೋಣ.