ಕನ್ನಡದಲ್ಲಿ ಸಾಕಷ್ಟು ಬೇಡಿಕೆ ಕಂಡುಕೊಂಡಿರುವ ಸಂದರ್ಭದಲ್ಲೇ ನಟಿ ರಾಗಿಣಿ ಮಲಯಾಳಂನತ್ತಲೂ ಪ್ರಯಾಣ ಬೆಳೆಸಲಿದ್ದಾರೆ. ನಟ ಸುದೀಪ್ ಜತೆ ವೀರ ಮದಕರಿಯಲ್ಲಿ 'ಜುಂ ಜುಂ ಮಾಯಾ...' ಹಾಡಿಗೆ ಹೆಜ್ಜೆ ಹಾಕಿ, ಶಂಕರ್ ಐಪಿಎಸ್‌ನಲ್ಲಿ ದುನಿಯಾ ವಿಜಯ್ ಜೊತೆ ಸಮುದ್ರದಲ್ಲಿ ಹೊರಳಾಡಿ, ಗಂಡೆದೆ ಚಿತ್ರದಲ್ಲಿ ಚಿರಂಜೀವಿ ಸರ್ಜಾ ಜತೆ ಕುಣಿದು ಕನ್ನಡ ಚಿತ್ರರಸಿಕರ ಮನಗೆದ್ದು, ಯುವಕರ ನಿದ್ದೆಗೆಡಿಸಿರುವ ಮಾರುದ್ದದ ಈ ನಟಿ ಇಷ್ಟೊಂದು ಅವಕಾಶ ಇದ್ದಾಗ ಮಲಯಾಳಂಗೆ ಹೋಗಿ ಏನು ಮಾಡುತ್ತಾರೆ ಅಂತ ಜನ ಕೇಳುತ್ತಿದ್ದರೆ, ರಾಗಿಣಿ ಮಾತ್ರ ಫುಲ್ ಖುಷಿ ಖುಷಿಯಾಗಿದ್ದಾರೆ.
ಆದರೆ ರಾಗಿಣಿಗೆ ಅಲ್ಲೊಂದು ಅದ್ಬುತ ಅವಕಾಶ ಸಿಕ್ಕಿದೆ. ಮಲಯಾಳಂನ ಜನಪ್ರಿಯ ನಟ ಮೋಹನ್ ಲಾಲ್ ಜತೆ ಅಭಿನಯಿಸುವ ಅವಕಾಶ ಸಿಕ್ಕಿದೆ. ಚಿತ್ರದ ಹೆಸರು 'ಕಂದಹಾರ್'. ಇಂಥ ಅವಕಾಶ ಕಳೆದುಕೊಳ್ಳಲು ಸಾಧ್ಯವೇ? ಅದಕ್ಕಾಗಿಯೇ ರಾಗಿಣಿ ಮಲಯಾಳಂನತ್ತ ಹೆಜ್ಜೆಯಿಟ್ಟಿದ್ದಾರೆ. ಮಲಯಾಳಂ ಚಿತ್ರ ಸಿಕ್ಕಿದ್ದೂ ಒಂಥರಾ ಅದೃಷ್ಟ. ಆ ಪಾತ್ರಕ್ಕೆ ಪಾರ್ವತಿ ಓಮನಕುಟ್ಟಿಯನ್ನು ಮೊದಲು ಆಯ್ಕೆ ಮಾಡಲಾಗಿತ್ತಂತೆ. ಆಕೆ ಕಾರಣಾಂತರಗಳಿಂದ ಹಿಂಜರಿದ ಕಾರಣ ಆ ಸ್ಥಾನವನ್ನು ರಾಗಿಣಿ ತುಂಬಿದರಂತೆ!
ಹೇಗಿದೆ ನೋಡಿ ಅದೃಷ್ಟ! ಬಹುಭಾಷಾ ತಾರೆಯರ ಸಂಖ್ಯೆ ಹೆಚ್ಚುತ್ತಿದ್ದು, ನಟಿಯಾಗಿ ಬೆಳೆಯಲು ಸಿಕ್ಕ ಅವಕಾಶವನ್ನು ಬಿಟ್ಟುಕೊಡಲು ಸಾಧ್ಯವೇ ಹೇಳಿ? ರಾಗಿಣಿ ಅವರಿಗೆ ವಿಶೇಷ ಶುಭ ಹಾರೈಸುವ ಸರದಿ ನಿಮ್ಮದು.