ಒಂದು ಚಿತ್ರ ಯಶಸ್ವಿಯಾದರೆ ಅದೇ ಹೆಸರನ್ನು ಇಟ್ಟು ಚಿತ್ರ ತೆಗೆಯುವ, ಅದೇ ಚಿತ್ರಕಥೆಯ ಮಾದರಿಯ ಕಥೆಯನ್ನೇ ಬಳಸುವ ಪರಿಪಾಟ ಸ್ಯಾಂಡಲ್‌ವುಡ್ಡಿನಲ್ಲಿ ಬಹುಕಾಲದಿಂದಲೂ ಸಂಪ್ರದಾಯದಂತೆ ಬೆಳೆದು ಬಂದಿದೆ. ಅದು ಆಗಾಗ ಮರುಕಳಿಸುತ್ತಲೂ ಇದೆ. ಇದರಲ್ಲೇ ಇನ್ನೊಂದು ವಿಧವೂ ಇದೆ. ಒಂದು ಚಿತ್ರ ಗೆದ್ದರೆ, ಎರಡನೇಯ ಭಾಗ ಮಾಡುವುದು. ಇದಕ್ಕೂ ಸಾಕಷ್ಟು ಎಗ್ಸಾಂಪಲ್ ಸಿಕ್ಕೇ ಸಿಗುತ್ತದೆ. ಇವುಗಳ ಪಟ್ಟಿಗೆ ಹೊಸ ಸೇರ್ಪಡೆ 'ಮತ್ತೆ ಮುಂಗಾರು'.
ಹೌದು. ಈ ಚಿತ್ರ ಅಕ್ಷರಶಃ ಮುಂಗಾರು ಮಳೆಯ ಮುಂದುವರಿದ ಭಾಗವಂತೆ. ಇದನ್ನು ಖುದ್ದು ನಿರ್ಮಾಪಕ ಇ. ಕೃಷ್ಣಪ್ಪನವರೇ ದೃಢಪಡಿಸಿದ್ದಾರೆ. ನಿರ್ಮಾಣವೂ ಅವರದ್ದೇ. ಈ ಹಿಂದೆ ಮುಂಗಾರು ಮಳೆಯನ್ನು ನಿರ್ಮಿಸಿದ್ದೂ ಕೂಡಾ ಅವರೇ. ಚಿತ್ರದ ಚಿತ್ರೀಕರಣ ಮುಂಗಾರು ಮಳೆಯ ಮಾದರಿಯಲ್ಲೇ ಇದ್ದರೂ ಇದು ನಡೆಯುವುದು ಮುಂಬೈ ಕಡಲ ತೀರದಲ್ಲಂತೆ. ಇದರ ಕಥೆಯ ಹಂದರ ನೋಡಿದಾಗ ದೇಶಭಕ್ತಿ, ಪ್ರೀತಿ ಪ್ರೇಮ ಹಾಗೂ ಮೀನುಗಾರರ ಕುಟುಂಬ ಜೀವನದ ಕಥಾನಕವಾಗಿದೆ. ದ್ವಾರ್ಕಿ ರಾಘವ ಚಿತ್ರವನ್ನು ನಿರ್ದೇಶಿಸಿದ್ದಾರೆ.
MOKSHA
ನಾಯಕ ಶ್ರೀನಗರ ಕಿಟ್ಟಿ ಹಾಗೂ ನಾಯಕಿ ಅರ್ಚನಾ ಮಲ್ಹೋತ್ರಾ. ಪೋಷಕ ನಟಿಯಾಗಿ ರೂಪಾದೇವಿ, ಪ್ರಮುಖ ಪಾತ್ರದಲ್ಲಿ ನೀನಾಸಂ ಅಶ್ವತ್ಥ್ ಇದ್ದಾರಂತೆ. ಉಳಿದ ತಾರಾಗಣದಲ್ಲಿ ರವಿಶಂಕರ್, ಏಣಗಿ ನಟರಾಜ್, ಮುನಿ, ಸಿಲ್ಲಿ ಲಲ್ಲಿ ಆನಂದ್, ಸುಷ್ಮಾ ಭಾರದ್ವಾಜ್ ಮೊದಲಾದವರಿದ್ದಾರೆ. ಸಮುದ್ರದ ಮೇಲೇ ಒಂದು ಅದ್ದೂರಿ ಸೆಟ್ ಹಾಕಿ ಗಮನ ಸೆಳೆಯುತ್ತಾರೆ ಕಲಾ ನಿರ್ದೇಶಕ ಮೋಹನ್ ಬಿ.ಕೆರೆ.
ಮುಂಗಾರುಮಳೆ, ಮೊಗ್ಗಿನ ಮನಸ್ಸು ನಂತರ ಇ. ಕೃಷ್ಣಪ್ಪ ಅವರ ಅಪಾರ ನಿರೀಕ್ಷೆಯ ಚಿತ್ರ ಈ ಮತ್ತೆ ಮುಂಗಾರು ಆಗಿದೆ. ಅದರ ಫಲ ಇನ್ನೊಂದು ತಿಂಗಳಲ್ಲಿ ಸಿಗಲಿದೆ.