ದೇಶಭಕ್ತಿ ಚಿತ್ರಗಳು ಹೇಗೇ ಇದ್ದರೂ ಗೆಲ್ಲುತ್ತವೆ ಎನ್ನುವ ಮಾತು ಇತ್ತೀಚೆಗೆ ಸುಳ್ಳಾಗಿದೆ. ಸಾಕಷ್ಟು ರಿಸ್ಕ್, ಗೋಳು, ಗೋಜಲು ಹಾಗೂ ರಗಳೆಗಳನ್ನು ಎದುರಿಸಿ ಚಿತ್ರ ನಿರ್ಮಿಸಿ ಚೆನ್ನಾಗಿದ್ದರೂ ನಿಂದನೆಗೆ ಒಳಗಾಗುವ ಸ್ಥಿತಿ ಇಂದು ಈ ಚಿತ್ರಗಳಲ್ಲಿ ಇದೆ.
ಇದರಿಂದಲೇ ಇರಬೇಕು ಹಿಂದೊಮ್ಮೆ ನಿರ್ಮಾಪಕ ಕೃಷ್ಣಪ್ಪ, 'ದೇಶಭಕ್ತಿ ಸಿನೆಮಾ ಮಾಡುವುದು ಅಷ್ಟು ಸುಲಭವಲ್ಲ. ಅದು ತುಂಬಾ ರಿಸ್ಕಿ. ಸಾಕಷ್ಟು ಬಂಡವಾಳ ಬೇಕು...' ಎಂದಿದ್ದರು. ಇವರು ಹಾಗೆನ್ನಲು ಕಾರಣವಿತ್ತು. ಪತ್ರಕರ್ತ ಸದಾಶಿವ ಶೆಣೈ 'ಮಾತೃಭೂಮಿ' ಎಂಬ ಸಿನೆಮಾವನ್ನು ತಮ್ಮ ಬ್ಯಾನರಿನಲ್ಲೇ ನಿರ್ದೇಶನ ಮಾಡಲಿದ್ದಾರೆ ಎಂದು ಹೇಳಿಕೆ ಕೊಟ್ಟಿದ್ದ ಇದೇ ಕೃಷ್ಣಪ್ಪನವರು, ಕೆಲ ತಿಂಗಳ ನಂತರ ಆ ಪ್ರಾಜೆಕ್ಟ್ ಅನ್ನು ಸದ್ಯಕ್ಕೆ ಕೈಬಿಟ್ಟಿದ್ದೇವೆ ಎಂದಿದ್ದರು.
ಹಾಗೆ ಮಾಡಲು ಏನು ಕಾರಣ ಎಂಬ ಪ್ರಶ್ನೆಗೆ ಮೇಲ್ಕಂಡ ಉತ್ತರ ಕೊಟ್ಟಿದ್ದರು. ಹಾಗಾದರೆ ಅವರೇ ನಿರ್ಮಿಸಿರುವ 'ಮತ್ತೆ ಮುಂಗಾರು' ಚಿತ್ರದ ಕತೆಯ ತಿರುಳೇನು ಎಂಬ ಪ್ರಶ್ನೆಗೆ ಒಂದು ಮೂಲದಿಂದ ಸಿಕ್ಕ ಮಾಹಿತಿ-ಇದೂ ಒಂದು ದೇಶಭಕ್ತಿ ಚಿತ್ರ! ಎಲ್ಲಾ ಎಷ್ಟೊಂದು ಸುಳಿಗಳಲ್ಲಿ ಯಾಕೆ ಸಿಕ್ಕಿರುತ್ತದೆ ಅಂತ ಗೊತ್ತಾಯಿತಾ?
ತಾವಾದರೆ ಒಂದು, ಅನ್ಯರಾದರೆ ಇನ್ನೊಂದು ಅನ್ನುವ ಧೋರಣೆ ಕನ್ನಡ ಚಿತ್ರರಂಗದಲ್ಲಿ ಬೇರೂರಿ ಬಿಟ್ಟಿದೆ. ಸದಭಿರುಚಿಯ ಚಿತ್ರ ಯಾರದ್ದೇ ಇರಲಿ ನಿರ್ಮಿಸುತ್ತೇವೆ ಅಂತ ನಿರ್ಮಾಪಕರು ಮುಂದೆ ಬರುತ್ತಿಲ್ಲ. ಚಿತ್ರ ರಂಗ ಇದರಿಂದ ಅನ್ಯ ರಾಜ್ಯಗಳಿಗಿಂತ ಸಾಕಷ್ಟು ಹಿಂದೆಯೇ ಉಳಿದಿದೆ. ಓಡಿ ಅವರನ್ನು ತಲುಪುವ ಯತ್ನವನ್ನೂ ಮಾಡುತ್ತಿಲ್ಲ.
ಇತ್ತೀಚೆಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೃಷ್ಣಪ್ಪ, ಮತ್ತೆ ಮುಂಗಾರು ತಂಡ, ಕತೆಯ ಎಳೆಯನ್ನು ಗುಟ್ಟಾಗಿ ಇಟ್ಟಿದ್ದರು. ಒಂದು ಲವ್ ಸ್ಟೋರಿ ಎಂದಷ್ಟೇ ಹೇಳಿ, ಕೈ ತೊಳೆದುಕೊಂಡಿದ್ದರು. ಆದರೆ, ಅಸಲಿ ವಿಷಯ ಏನಪ್ಪಾ ಎಂದರೆ- ಇದೊಂದು ದೇಶಭಕ್ತಿಗೆ ಸಂಬಂಧಿಸಿದ ಚಿತ್ರ. ಇಲ್ಲಿ ನಟ ನೀನಾಸಂ ಅಚ್ಯುತ ಮುಸ್ಲಿಮನ ಪಾತ್ರ ಮಾಡುತ್ತಿದ್ದಾರೆ. ದ್ವಿತೀಯಾರ್ಧದ ನಂತರ ಅವರು ಮೂಕನಂತೆ ವರ್ತಿಸುತ್ತಾರೆ. ಕಾರಣ-ಅವರ ನಾಲಿಗೆಯನ್ನು ಕತ್ತರಿಸಲಾಗುತ್ತದೆ!
ವಿಷಯ ಏನೇ ಇರಲಿ, ಕೃಷ್ಣಪ್ಪನವರು ಇಂಥದ್ದೊಂದು ಸವಾಲಿನ ಕತೆಯನ್ನು ಕೈಗೆತ್ತಿಕೊಂಡಿರುವುದು ನಿಜಕ್ಕೂ ಸ್ವಾಗತಾರ್ಹ.