ಮೊನ್ನೆ ಡೆಡ್ಲಿ ಸೋಮ-2 ಪತ್ರಿಕಾಗೋಷ್ಠಿ ಆಯೋಜನೆಯಾಗಿತ್ತು. ಎಲ್ಲರೂ ತಡವಾಗಿಯಾದರೂ ಬಂದು ಸೇರಿದ್ದರು. ಬಂದವರ ಬಾಯಲ್ಲೆಲ್ಲಾ ಚಿತ್ರದ ಗುಣಗಾನವೇ ಕೇಳಿಬರುತ್ತಿತ್ತು.
ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ತಮ್ಮ ಕೆಲಸದ ಬಗ್ಗೆ ತಾವೇ ಥ್ರಿಲ್ ಆಗಿದ್ದರು. ಡೆಡ್ಲಿ ಸೋಮ ಚಿತ್ರಕ್ಕಿಂತ ಹತ್ತು ಪಟ್ಟು ಚೆನ್ನಾಗಿ ಮೂಡಿಬಂದಿದೆ ಎಂದರು. ನಟ ಆದಿತ್ಯ ಸಾಹಸ ದೃಶ್ಯಗಳಲ್ಲಿ ಹೊಂದಿಕೊಂಡ ಪರಿಗೆ ಹ್ಯಾಟ್ಸ್ ಆಫ್ ಎಂದು ಕೊಂಡಾಡಿದರು.
ಅಷ್ಟು ಸಿಕ್ಕಿದ್ದೇ ಪುಳಕಿತರಾಗಿ ಮೈಕ್ ಹಿಡಿದ ಚಿತ್ರದ ರೀರೆಕಾರ್ಡಿಂಗ್ ಜವಾಬ್ದಾರಿ ಹೊತ್ತಿರುವ ಸಾಧುಕೋಕಿಲ, ಚಿತ್ರದ ತುಣುಕುಗಳು ಹಾಗೂ ಕೆಲ ದೃಶ್ಯಗಳನ್ನು ನೋಡಿ ರೋಮಾಂಚನಗೊಂಡಿದ್ದಾಗಿ ನಿರ್ದೇಶಕರ ಕೆಲಸಕ್ಕೆ ಚಪ್ಪಾಳೆಯಾದರು.
ರವಿ ಶ್ರೀವತ್ಸ ಹಾಗೂ ಸಹ ನಿರ್ದೇಶಕರ ತಂಡ ವೇದಿಕೆಯೇರಿದಾಗ ಅಲ್ಲಿ ಹೆಚ್ಚಿನವರಲ್ಲಿ ಆತ್ಮವಿಶ್ವಾಸ ಕಂಡುಬಂತು. ರವಿ ಶ್ರೀವತ್ಸ-ಇಲ್ಲಿ ಮಾಮೂಲಿ ಸಿನಿಮಾ ಮೇಕಿಂಗ್ ಇರುವುದಿಲ್ಲ. ಇದೊಂದು ಆಕ್ಷನ್ ಸಿನಿಮಾ ಆದರೂ ರಕ್ತಪಾತ ಇರುವುದಿಲ್ಲ. ಸಾಹಸ ದೃಶ್ಯಗಳು ಚಿತ್ರದ ಪ್ಲಸ್ ಪಾಯಿಂಟ್ ಎಂದರು.
ನಿರ್ಮಾಪಕರಿಬ್ಬರೂ ನಾವು ಕೇಳಿದ್ದನ್ನು ಕೊಟ್ಟಿದ್ದಾರೆ. ಇದು ಯಾಕೆ? ಇದು ಹೀಗೇಕೆ? ಎಂದು ಯಾವ ಹಂತದಲ್ಲೂ ಪ್ರಶ್ನೆ ಮಾಡಿಲ್ಲ. ಮೂರ್ತಿಯವರಂತೂ ಎಲ್ಲ ವಿಷಯದಲ್ಲೂ ಹೊಂದಾಣಿಕೆ ಮಾಡಿಕೊಂಡು, ವಿಶೇಷ ಮುತುವರ್ಜಿ ವಹಿಸಿ, ಸಹಕರಿಸಿದರು ಎಂದರು. ಇನ್ನೊಬ್ಬ ನಿರ್ಮಾಪಕ ಮಂಜುನಾಥ್ ಚಿತ್ರದ ಬಗ್ಗೆ ಮಾತುಕತೆ ನಡೆದಾಗಿನಿಂದ ಜತೆಗಿರುವುದನ್ನು ನೆನೆದು ಕೃತಾರ್ಥರಾದರು.
ಆದಿತ್ಯ-ಇದು ನಿರ್ದೇಶಕರ ಚಿತ್ರ. ಬ್ರೇಕ್ ಸಿಗುತ್ತದೆ ಎಂಬ ನಂಬಿಕೆ ಇದೆ. ನಿರ್ದೇಶಕರು ಹೆಣೆದಿರುವ ಕತೆಯೇ ಹಾಗಿದೆ ಎಂದು ನಿಟ್ಟುಸಿರು ಬಿಟ್ಟರು. ನಟಿ ಮೇಘನಾ-ಅವಕಾಶ ಕೊಟ್ಟಿದ್ದಕ್ಕೆ ಥ್ಯಾಂಕ್ಸಪ್ಪ ಥ್ಯಾಂಕ್ಸು ಎಂದು ಮಾತಿಗೆ ಮಂಗಳಗೀತೆ ಬರೆದರು.
ಅಂದಹಾಗೆ ಡೆಡ್ಲಿ 2 ಚಿತ್ರೀಕರಣ ಮುಗಿದಿದ್ದು, ಸದ್ಯದಲ್ಲೇ ರೀರೆಕಾರ್ಡಿಂಗ್ ಕೂಡ ಮುಗಿಯಲಿದೆ. ಮುಂದಿನ ತಿಂಗಳು ತೆರೆ ಕಾಣುವ ಸಾಧ್ಯತೆಯಿದೆ. ಅದಕ್ಕೆ ಇಷ್ಟೆಲ್ಲಾ ಬಿಲ್ಟಪ್ಪು. ಚಿತ್ರ ಗೆದ್ದರೆ ಪರವಾಗಿಲ್ಲ. ಇಲ್ಲವಾದರೆ ಆದಿತ್ಯ ಕಲಾಸಿಪಾಳ್ಯದಲ್ಲಿ ಅರೆನಗ್ನಾವಸ್ಥೆಯಲ್ಲಿ ಓಡಿ ಜನರ ಚಪ್ಪಾಳೆ ಗಿಟ್ಟಿಸಿದ್ದೇ ಲಾಭವಾದೀತು.