20 ವರ್ಷದ ಹಿಂದೆ ಒಂದು ಹಿಟ್ ಚಿತ್ರ ಬಂದಿತ್ತು. ಅದರ ನಾಯಕಿ ಮಾಲಾಶ್ರೀ. ಆ ಚಿತ್ರ ನಿಮಗೆಲ್ಲಾ ಗೊತ್ತಿರಲೇ ಬೇಕು. ಹೌದು ನಮ್ಮ ಮಂಡ್ಯದ ಗಂಡು ಅಂಬರೀಶ್ ಜತೆ ಭಲೆ ಜೋಡಿಯಾಗಿ ಮೆರೆದ ರಾಣಿ ಮಹಾರಾಣಿ ಚಿತ್ರದ ಬಗ್ಗೆಯೇ ಹೇಳುತ್ತಿರುವುದು.
ಅಂದು ಧಮಾಕಾ ಸಿಡಿಸಿದ್ದ ಈ ಚಿತ್ರ ಈಗ ಮತ್ತೆ ಕನ್ನಡ ಪರದೆ ಮೇಲೆ ಬರುತ್ತಿದೆ. ಇದು ರಾಣಿ ಮಹಾರಾಣಿ ಭಾಗ 2 ಅಂತೂ ಅಲ್ವೇ ಅಲ್ಲ. ಏಕೆಂದರೆ ಈ ಚಿತ್ರದಲ್ಲಿ ಮಾಲಾಶ್ರೀ ಇಲ್ಲ. ಅವರ ಬದಲು ಪೂಜಾಗಾಂಧಿ ಇದ್ದಾರೆ. ಅಂದು ನಮ್ಮ ಮಾಲಾಶ್ರೀ ಕುಡಿದ ಮತ್ತಿನಲ್ಲಿ ಹಾಡಿದ 'ಕೂಗೋ ಕೋಳಿಗೆ ಖಾರಮಸಾಲೆ... ಮೇಯೋ ಮೇಕೆಗೆ ಮಿರ್ಚಿ ಮಸಾಲೆ...' ಹಾಡನ್ನು ಈಗ ಪೂಜಾ ಹಾಡಲಿದ್ದಾರೆ. ವಿಶೇಷ ಅಂದರೆ ಈ ಚಿತ್ರಕ್ಕಾಗಿ ಪೂಜಾ ತಮ್ಮ ದೇಹದ ತೂಕವನ್ನೂ ಒಂದಿಷ್ಟು ಇಳಿಸಿಕೊಂಡಿದ್ದಾರಂತೆ. ಜನಪ್ರಿಯತೆ ಕಳೆದುಕೊಳುತ್ತಿರುವ ಭಯಕ್ಕೆ ಏನೆಲ್ಲಾ ಆಗುತ್ತದೆ ಎನ್ನುವುದಕ್ಕೆ ಇದೊಂದು ಸೂಕ್ತ ಉದಾಹರಣೆ.
ರಾಣಿಯನ್ನು ಕರೆತರುವ ಸಾಹಸಕ್ಕೆ
WD
ಕೈ ಹಾಕಿರುವವರು ನಿರ್ದೇಶಕ ಬಿ.ರಾಮಮೂರ್ತಿ. ಆ ಸಿನಿಮಾಗೂ ಇವರೇ ನಿರ್ದೇಶಕರಾಗಿದ್ದರು. ನಿರ್ಮಾಣವನ್ನು ಅಂದು ಜೈ ಜಗದೀಶ್ ಮಾಡಿದ್ದರು. ಆದರೆ ಈಗ ರಾಮಣ್ಣನ ಸಹೋದರ ಸತ್ಯನಾರಾಯಣ ಬಿ. ಈ ಕಾರ್ಯ ನಿರ್ವಹಿಸುತ್ತಿದ್ದಾರೆ. ಚಿತ್ರದ ಹೆಸರು ಸ್ವಲ್ಪ ಬದಲಾಗಿ 'ನಾ ರಾಣಿ ನೀ ಮಹಾರಾಣಿ' ಎಂದಾಗಿದೆ.
ಚಿತ್ರವೂ ಸಹ ಯಥಾವತ್ ಇದೆ. ಒಬ್ಬಾಕೆ ನಗರದಲ್ಲಿರುವ ಚಿತ್ರನಾಯಕಿಯಾಗಿರುತ್ತಾಳೆ. ಇನ್ನೊಬ್ಬಾಕೆ ಹಳ್ಳಿಯಲ್ಲಿ ಸೀದಾಸಾದಾ ಹುಡುಗಿ. ಈಕೆ ಆ ನಾಯಕಿಯಂತಿದ್ದಾಳೆ ಎಂದು ಹಳ್ಳಿ ಮಂದಿಗೆ ಥ್ರಿಲ್ಲೋ ಥ್ರಿಲ್ಲು... ಈ ಇಬ್ಬರೂ ಒಬ್ಬೊಬ್ಬರನ್ನು ಪ್ರೀತಿಸುತ್ತಾರೆ. ಅವರಲ್ಲಿ ಒಬ್ಬ ಅಕ್ಷಯ್- ಹಿಂದೆ ಈ ಪ್ರೀತಿ ಶಾಶ್ವತಾನಾ? ಚಿತ್ರದಲ್ಲಿ ನಟಿಸಿದ್ದ.
ಇನ್ನೊಬ್ಬನ ಹೆಸರೂ ಅಕ್ಷಯ್. ಈತ ರಾಮಮೂರ್ತಿ ಮಗ. ವಿಷ್ಣುವರ್ಧನ್ ಜತೆ ಸಿರಿವಂತ ಚಿತ್ರದಲ್ಲಿ ಮಗನ ಪಾತ್ರ ಮಾಡಿದ್ದ. ಮೊನ್ನೆಯಷ್ಟೇ 'ಎಫ್ಎಂ ರೇಡಿಯೋ' ಚಿತ್ರದಲ್ಲಿ ಖಳನಾಯಕನ ಪಾತ್ರ ಮಾಡಿದ್ದ.