ಸೋಲಿನ ಸರದಾರ ಲೂಸ್ ಮಾದ
ರಮ್ಯಾ ಜತೆ ನಟಿಸಿ ಯೋಗ ಪರೀಕ್ಷೆಗೆ ಒಳಗಾಗಿರುವ ಯೋಗೀಶ್ ಅವರ ಯೋಗಿ ಚಿತ್ರ ಆಚೆ ಬರಲು ಹರಸಾಹಸ ಪಡುತ್ತಿದೆ. ಕಾರಣ ಯೋಗೀಶ್ ಅವರ ಸಾಲು ಸಾಲು ಸೋಲು ನಿರ್ಮಾಪಕರನ್ನು ಕಂಗೆಡಿಸಿದೆ. ಇವರ ರಾವಣ, ಪ್ರೀತ್ಸೇ ಪ್ರೀತ್ಸೆ, ಯೋಗಿ ಹಾಗೂ ಮಿಸ್ಟರ್ ಪೇಂಟರ್ ಚಿತ್ರಗಳು ಮುಗ್ಗರಿಸಿ ಬಿದ್ದಿದ್ದೇ ತಡ, ಕಳೆದ ಮೂರು ತಿಂಗಳ ಈಚೆ ಜಿಂಕೆ ಮರಿ ಗಾಂಧಿನಗರದಲ್ಲಿ ಕಾಣಿಸಿಕೊಳ್ಳುತ್ತಲೇ ಇಲ್ಲ. ತರೀಕೆರೆ ಏರಿಮೇಲೆ ಮಲಗಿಬಿಟ್ಟಿದೆ ಅನ್ನುವ ಸುದ್ದಿ ಕೇಳಿ ಬರುತ್ತಿದೆ.ವಿಪರ್ಯಾಸ ಅಂದರೆ ಯಾವ ನಿರ್ಮಾಪಕರೂ ಇದೇ ಯೋಗಿಯ ಹಿಂದೆ ಬಿದ್ದು, ಕೈಕಾಲು ಹಿಡಿದು, ಕಾಲ್ಶೀಟ್ ಕಾಲ್ಶೀಟ್ ಎಂದು ಗೋಗರೆದಿದ್ದರೋ ಅದೇನಿರ್ಮಾಪಕರು ಇಂದು ಯೋಗಿ ಸಿನಿಮಾವನ್ನು ಬಿಡುಗಡೆ ಮಾಡಲು ವಿಲವಿಲ ಒದ್ದಾಡುತ್ತಿದ್ದಾರೆ! ಚಿತ್ರ ಬದುಕಿನಲ್ಲಿ ನಟನ ಬೇಡಿಕೆಯೂ ನೀರ ಮೇಲಿನ ಗುಳ್ಳೆ ಅನ್ನಲು ಇದಕ್ಕಿಂತ ಉತ್ತಮ ಉದಾಹರಣೆ ಬೇಕೆ? ಇನ್ನೂ ಮುಂದುವರಿದು ನೋಡಿದರೆ, ಇದೇ ಯೋಗಿ ಅಭಿನಯದ 'ಪುಂಡ' ಚಿತ್ರ ಚಿತ್ರೀಕರಣ ಮುಗಿಸಿ ತಿಂಗಳಾಗಿದೆ. ಇನ್ನೂ ಕುಪ್ಪು ಸ್ವಾಮಿ 'ಪುಂಡ'ನನ್ನು ಹೊರಬಿಡಲು ಹೆದರುತ್ತಿದ್ದಾರೆ. ಇನ್ನೊಂದು ಕಡೆ 'ದೇವದಾಸ್' ಚಿತ್ರ ಬರಬೇಕಿದೆ. ಮತ್ತೊಂದೆಡೆ 'ಧೂಳ್' ಮುಕ್ಕಾಲು ಭಾಗ ಮುಗಿದಿದೆ ಎನ್ನಲಾಗಿದೆ. ಇವರಲ್ಲಿ ಯಾರು ಮೊದಲು ಬಿಡುಗಡೆ ಮಾಡುತ್ತಾರೆ ಎಂದು ಅಚ್ಚರಿಯಿಂದ ಕನ್ನಡ ಚಿತ್ರರಂಗ ನೋಡುತ್ತಿದ್ದರೆ, ಪ್ರತಿಯೊಬ್ಬರೂ ಹಿಂದೇಟು ಹಾಕುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.ಯೋಗಿಯ ಹೋಮ್ ಬ್ಯಾನರ್‌ನ ಚಿತ್ರ 'ಯಕ್ಷ'ದಲ್ಲಿ ಬಾಲಿವುಡ್ ನಟ ನಾನಾ ಪಾಟೇಕರ್ ಇದ್ದಾರೆ ಎನ್ನುವುದೇ ಹೈಲೈಟ್. ಇವಿಷ್ಟನ್ನು ಬಿಟ್ಟರೆ ಯೋಗಿ ಕತೆ ಕೇಳುವವರೇ ಇಲ್ಲ! ಈ ನಡುವೆ ಲೂಸ್ ಮಾದ ಆಚೆ ಬರುವುದಾದರೂ ಹೇಗೆ ಅನ್ನುತ್ತಿದೆ ಚಿತ್ರರಂಗ.