'ಹೃದಯವಂತರಿಗೆ ಮಾತ್ರ'! ಹೌದು. ಆಶ್ಚರ್ಯಪಡಬೇಡಿ. ಇಂಥದ್ದೊಂದು ಟ್ಯಾಗ್‌ಲೈನ್ ಹೊತ್ತು ಜಗ್ಗೇಶರ ಲಿಫ್ಟ್ ಕೊಡ್ಲಾ ಚಿತ್ರ ಬರುತ್ತಿದೆ. ಇದೇನು ಹಿಂದೆಲ್ಲಾ 'ವಯಸ್ಕರಿಗೆ ಮಾತ್ರ', 'ಮಕ್ಕಳಿಗೆ ಮಾತ್ರ', 'ಬುದ್ಧಿವಂತರಿಗೆ ಮಾತ್ರ' ಎಂಬೆಲ್ಲಾ ಮಾದರಿಯ ಚಿತ್ರ ಬರುತ್ತಿದ್ದವು. ಇದೇನು ಹೊಸ ರೀತಿ ಅಂದುಕೊಂಡಿರಾ? ಹೌದು, ಚಿತ್ರ ನೋಡಿದಾಗ ಏಕೆ ಎನ್ನುವ ಅರಿವಾಗುತ್ತದೆ ಎನ್ನುತ್ತಾರೆ ಜಗ್ಗೇಶ್.
ಅದೇನೇ ಇರಲಿ 'ಮನುಷ್ಯ ಜೀವನ ಅಮೂಲ್ಯ. ಇದನ್ನು ನಾವಾಗಿಯೇ ಕೆಡಿಸಿಕೊಳ್ಳಬಾರದು. ಕಷ್ಟ ಬರುವುದು ಮನುಷ್ಯನಿಗೆ. ಅದರಿಂದ ಧೃತಿಗೆಡಬಾರದು. ಈಸಬೇಕು, ಇದ್ದು ಜಯಿಸಬೇಕು' ಎಂಬ ಸಂದೇಶವನ್ನು ಸಾರುವ ಚಿತ್ರ ಲಿಫ್ಟ್ ಕೊಡ್ಲಾ. ಇನ್ನೇನು ತೆರೆ ಕಾಣಲು ಸಜ್ಜಾಗಿರುವ ಈ ಚಿತ್ರ ಮನುಷ್ಯನ ಆತ್ಮಹತ್ಯೆ ವಿರುದ್ಧ ನಡೆಯುವ ಹೋರಾಟದ ಚಿತ್ರ ಅನ್ನಬಹುದು. ಏನೇ ಕಷ್ಟ ಬಂದರೂ ಸಾಯುವ ನಿರ್ಧಾರ ಮಾಡಬಾರದು ಎನ್ನುವುದನ್ನು ಎಂಬುದನ್ನು ಜನರಿಗೆ ತಿಳಿಸಲು ಜಗ್ಗೇಶ್ ಈ ಚಿತ್ರ ಮಾಡಿದ್ದಾರೆ.
ಇವರ ಪ್ರಕಾರ, ಈ ಚಿತ್ರ ಪ್ರತಿಯೊಬ್ಬರ ಜೀವನಕ್ಕೆ ಅತಿ ಹತ್ತಿರವಾದ ಚಿತ್ರ. ಕಮರ್ಷಿಯಲ್ ಚಿತ್ರ ಆದರೂ, ಮನ ಕಲಕುವ ನೂರಾರು ದೃಶ್ಯಗಳು ಇದರಲ್ಲಿ ಇವೆ. ಇದನ್ನು ನೋಡಲೇ ಬೇಕು ಅನ್ನುತ್ತಾರೆ. ಅಂದಹಾಗೆ ಇದು ತೆಲುಗಿನ 'ಮಾ ಶ್ರೇಯೋಭಿಲಾಷಿ' ಚಿತ್ರದ ರಿಮೇಕ್ ಅಂತ ವಿವರಿಸಿ ಹೇಳಬೇಕಾಗಿಲ್ಲ. ಆದರೆ ಜಗ್ಗೇಶ್ ಹಾಗೂ ಚಿತ್ರದ ನಿರ್ದೇಶಕ ಅಶೋಕ್ ಕಶ್ಯಪ್ ಸೇರಿ ಚಿತ್ರವನ್ನು ಸ್ಥಳೀಯ ಅಗತ್ಯಕ್ಕೆ ತಕ್ಕಂತೆ ಬದಲಿಸಿದ್ದಾರಂತೆ!