'ಮೇಲಿಂದ ಜಿಗಿಯೋದಂದ್ರೆ ನಂಗೆ ಪಂಚಪ್ರಾಣ' ಈ ಒಂದು ಡೈಲಾಗನ್ನು ಥ್ರಿಲ್ಲರ್ ಮಂಜು ಆಡಿದರೆ ಚೆಂದ. ಬಿಡುಗಡೆಗೆ ಸಿದ್ಧವಾಗುತ್ತಿರುವ ಡೆಡ್ಲಿ ಸೋಮ-2 ಚಿತ್ರದ ಶೂಟಿಂಗ್ ಸಮಯದಲ್ಲಿ ಕಾಲು ಮುರಿದುಕೊಂಡ ನಾಯಕ ಆದಿತ್ಯ ಆಡಿದರೂ ಖುಶಿ ಪಡಬಹುದಿತ್ತು. ಆದರೆ ನಟಿ ಅರ್ಚನಾ ಗುಪ್ತಾ ಆಡಿದರೆ!?
ಹೌದು. ಬಾಲಿವುಡ್ಡಿಗೂ ಹಾರಿ ಬಂದಿರುವ ಈ ತೆಲುಗು ನಟಿಮಣಿಗೆ ಜಿಗಿಯುವುದು, ಜಂಪ್ ಮಾಡುವುದು, ಮೇಲಿಂದ ನೆಗೆಯುವುದು ಅಂದರೆ ಇಷ್ಟವಂತೆ. ಅರ್ಚನಾ ಕನ್ನಡಕ್ಕೆ ಕಾಲಿಟ್ಟಿದ್ದು ಸರ್ಕಸ್ ಚಿತ್ರದ ಮೂಲಕ. ಅಲ್ಲಲ್ಲ, ಈಕೆಯನ್ನು ಅಲ್ಲೆಲ್ಲಿಂದಲೋ ತಂದು ಕನ್ನಡ ಅಂಗಳಕ್ಕೆ ಬಿಟ್ಟಿದ್ದು ನಿರ್ದೇಶಕ ದಯಾಳ್. ಸರ್ಕಸ್ ತನ್ನ ಆಟವನ್ನು ಮೂರೇ ದಿನದಲ್ಲಿ ಮುಗಿಸಿದ ನಂತರ ಅರ್ಚನಾಗೆ ಕೈ ಬೀಸಿ ಕರೆದದ್ದು ಜಗ್ಗೇಶ್ ಅಭಿನಯದ ಲಿಫ್ಟ್ ಕೊಡ್ಲಾ ಚಿತ್ರ. ಚಮ್ಕಾಯ್ಸಿ ಚಿಂದಿ ಉಡಾಯ್ಸಿ ಚಿತ್ರದಲ್ಲಿ ನಾಯಕಿ ನಿಧಿ ಸುಬ್ಬಯನನ್ನು ಬೀಚ್ ಮಧ್ಯೆ ಹೊರಳಾಡಲು ಪ್ರೇರೇಪಣೆ ನೀಡಿದ ಅದೇ ಅಶೋಕ್ ಕಶ್ಯಪ್ ಹಾಗೂ ರೇಖಾ ರಾಣಿ ಅರ್ಚನಾಗೆ ಬುಲಾವ್ ನೀಡಿದರು.
ಆ ಚಿತ್ರ ಮುಗಿಮುಗಿಯುತ್ತಿದ್ದಂತೇ ಕಾರ್ತಿಕ್ ಚಿತ್ರ ಸಿಕ್ಕಿತು. ಅದೇ ಅರ್ಚನಾಗೆ ಸ್ವಿಮಿಂಗ್ ಗೊತ್ತಂತೆ. ಕಾರು ಓಡಿಸುವುದು, ಕುದುರೆಯನ್ನು ಪಳಗಿಸುವುದು ಎಂದರೆ ಬಲು ಪ್ರೀತಿಯಂತೆ. ಎತ್ತರದಿಂದ ಜಿಗಿಯೋಕೆ ಇಷ್ಟವಂತೆ. ಮೊದಲು ನಟಿಸಿದ್ದು ಹಿಂದಿ ಸಿನಿಮಾವಾದರೂ ಅಲ್ಲಿ ಅರ್ಚನಾಗೆ ಕೂಲಿ ಮಾಡೋ ಹುಡುಗಿಯ ಪಾತ್ರವಾಗಿತ್ತಂತೆ. ಆದರೆ, ಸರ್ಕಸ್ ಸಿನೆಮಾದಲ್ಲಿ ನಟಿಸಿಹೋದ ಮೇಲೆ ಅಲ್ಲಿಯೂ ನಾಯಕಿಯ ಪಾತ್ರ ಸಿಕ್ಕಿತಂತೆ. ಹಾಗಾಗಿ ಹ್ಯಾಟ್ಸ್ ಆಫ್ ಟು ಕನ್ನಡ ಎಂದು ಕೃತಜ್ಞತಾ ನಗು ಬೀರುತ್ತಾರೆ ಗುಪ್ತಾ. ಅಂದ ಹಾಗೆ, ಅರ್ಚನಾ ಒಂದಷ್ಟು ತೂಕ ಇಳಿಸಿದ್ದಾರೆ. ಹಿಂದಿಯ ಹಾಗೂ ಕನ್ನಡದ ಕಾರ್ತಿಕ್ ಸಿನಿಮಾಗೋಸ್ಕರ ಹಾಗೆ ಮಾಡಿಕೊಂಡಿದ್ದೇನೆ ಎನ್ನುತ್ತಾರೆ.