ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಬರಲಿದೆ ರಾಧಿಕಾರ ಕೃಷ್ಣನ ಲವ್ ಸ್ಟೋರಿ (Radhika Pandith | Shashank | Krishnan Love Story | Ajay | Moggina Manasu)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ಮೊಗ್ಗಿನ ಮನಸು ಖ್ಯಾತಿಯ ಶಶಾಂಕ್ ಇದೀಗ ತಮ್ಮ ಕನಸಿನ ಕೂಸು ಕೃಷ್ಣನ್ ಲವ್ ಸ್ಟೋರಿ ಜೊತೆಗೆ ಮರಳಿದ್ದಾರೆ. ಇದೇ ಜೂ.18ರಂದು ಈ ಲವ್ ಸ್ಟೋರಿಗೆ ಮುಕ್ತಿ ದೊರೆಯಲಿದೆ ಅರ್ಥಾತ್ ಚಿತ್ರ ತೆರೆ ಕಾಣಲಿದೆ. ಕನ್ನಡದ ಹುಡುಗಿ ರಾಧಿಕಾ ಪಂಡಿತ್ ಹಾಗೂ ಅಜಯ್ ತಾರಾಗಣದ ಈ ಚಿತ್ರ ಖಂಡಿತವಾಗಿಯೂ ಜನರಿಂದ ಶಹಬ್ಬಾಸ್ ಗಿರಿ ಪಡೆಯಲಿದೆ ಎಂಬುದೇ ನಿರ್ದೇಶಕ ಶಶಾಂಕ್ ಅಭಿಮತ.

ರಾಧಿಕಾ ಪಂಡಿತ್ ಕೂಡಾ ಇದಕ್ಕೆ ಹೌದೆನ್ನುತ್ತಾರೆ. ನನ್ನ ಜೀವನದಲ್ಲಿ ಮಟಿಸಿದ ಒಂದು ಉತ್ತಮ ಚಿತ್ರ ಇದು. ಖಂಡಿತವಾಗಿಯೂ ಇದು ನನ್ನ ಚಿತ್ರ ಜೀವನಕ್ಕೆ ಉತ್ತಮ ಬ್ರೇಕ್ ನೀಡಲಿದೆ ಎನ್ನುತ್ತಾರೆ.

ನಾನು ಈವರೆಗಿನ ಚಿತ್ರಗಳಲ್ಲಿ ಮೇಲ್ಮಧ್ಯಮ ವರ್ಗದ ಹುಡುಗಿಯ ಪಾತ್ರದಲ್ಲೇ ಕಾಣಿಸಿಕೊಂಡಿದ್ದೆ. ಆದರೆ ಈ ಚಿತ್ರದಲ್ಲಿ ನಾನು ಕೆಳಮಧ್ಯಮ ವರ್ಗದ ಹುಡುಗಿಯ ಪಾತ್ರದಲ್ಲಿ ಅಭಿನಯಿಸಿದ್ದೇನೆ. ಹೀಗಾಗಿ ಈ ಚಿತ್ರದಲ್ಲಿ ನಾನು ಮೊದಲಿನ ಚಿತ್ರಗಳಿಗಿಂತಲೂ ಸಾಕಷ್ಟು ಕಷ್ಟಪಟ್ಟು ನಟಿಸಿದ್ದೇನೆ. ಯಾಕೆಂದರೆ ಅಂಥಾ ಭಾವನೆಗಳನ್ನು ಮುಖದಲ್ಲಿ ತೋರಿಸಲು ನಾನು ಇನ್ನೂ ಹೆಚ್ಚು ಶ್ರಮ ಪಡಬೇಕಾಗಿತ್ತು ಎನ್ನುತ್ತಾರೆ ರಾಧಿಕಾ.

ನಿರ್ದೇಶಕ ಶಶಾಂಕ್, ತಾನು ಈ ಚಿತ್ರವನ್ನು ಒಬ್ಬ ಸಾಮಾನ್ಯ ಮನುಷ್ಯನಾಗಿ, ಹಾಗೂ ಒಬ್ಬ ನಿರ್ದೇಶಕನಾಗಿ ನೋಡಿದ್ದೇನೆ. ಎರಡೂ ವಿಧದಲ್ಲಿಯೂ ನನಗೆ ಚಿತ್ರ ತುಂಬ ಇಷ್ಟವಾಗಿದೆ. ಖಂಡಿತವಾಗಿಯೂ ಪ್ರೇಕ್ಷಕ ಪ್ರಭು ಇಷ್ಟಪಡುತ್ತಾನೆಂದು ನಂಬಿಕೆಯಿದೆ ಎನ್ನುತ್ತಾರೆ.

ಉದಯ್ ಕೆ. ಮೆಹ್ತಾ ಹಾಗೂ ಮೋಹನ್ ಜಿ. ನಾಯಕ್ ಜಂಟಿಯಾಗಿ ನಿರ್ಮಿಸಿರುವ ಚಿತ್ರವನ್ನು ವೀಕ್ಷಿಸಿರುವ ಸೆನ್ಸಾರ್ ಮಂಡಳಿ ಯು ಹಾಗೂ ಎ ಸರ್ಟಿಪಿಕೆಟ್ ನೀಡಿದೆ. ದಕ್ಷಿಣ ಭಾರತದ ಮೂರು ರಾಜ್ಯದಲ್ಲಿ ಚಿತ್ರದ ಶೂಟಿಂಗ್ ನಡೆದಿದೆ. ನಿರ್ದೇಶಕರೇ ಚಿತ್ರದ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ವಿ. ಶ್ರೀಧರ್ ಮಧುರ ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಛಾಯಾಗ್ರಹಣ ಶೇಖರ್ ಚಂದ್ರ ಛಾಯಾಗ್ರಹಣ ಇದೆ. ಕೆ.ಎಂ. ಪ್ರಕಾಶ್ ಸಂಕಲನದ ಈ ಚಿತ್ರಕ್ಕೆ ಜಯಂತ್ ಕಾಯ್ಕಿಣಿ, ಯೋಗರಾಜ್ ಭಟ್, ಶಶಾಂಕ್ ಗೀತ ರಚನೆ ಮಾಡಿದ್ದಾರೆ.

ರವಿವರ್ಮ ಸಾಹಸ ನಿರ್ದೇಶಕರು. ಯೋಗೀಶ್ ಹುಣಸೂರು ಕಾರ್ಯಕಾರಿ ನಿರ್ಮಾಪಕರಾಗಿರುವ ಚಿತ್ರಕ್ಕೆ ಸಿ.ಎಚ್. ಸುರೇಶ್ ಹಾಗೂ ಎಚ್. ಲೋಕೇಶ್ ಸಹ ನಿರ್ಮಾಪಕರಾಗಿ ಇದ್ದಾರೆ. ಒಟ್ಟಾರೆ ಬರುವ ವಾರ ತೆರೆ ಕಾಣುವ ಕೃಷ್ಣ ಜನರಿಗೆ ಮೋಡಿ ಮಾಡುತ್ತಾನೋ ಗೊತ್ತಿಲ್ಲ. ಕಾಯುವ ಸರದಿ ಮಾತ್ರ ಎಲ್ಲರದು. ಕೃಷ್ಣನ ಲವ್ ಸ್ಟೋರಿಗೆ ಈಗಲೇ ಒಂದು ಶುಭ ಹಾರೈಸೋಣ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ರಾಧಿಕಾ ಪಂಡಿತ್, ಶಶಾಂಕ್, ಕೃಷ್ಣನ್ ಲವ್ ಸ್ಟೋರಿ, ಅಜಯ್, ಮೊಗ್ಗಿನ ಮನಸು