ಕನ್ನಡ ಚಿತ್ರಗಳು ಬಿಡುಗಡೆಯಾಗಿ ಒಂದು ವಾರ ನಿಲ್ಲೋದೇ ಕಷ್ಟ ಎಂಬಂಥ ಪರಿಸ್ಥಿತಿ ಇದ್ದರೂ, ಪುನೀತ್ ರಾಜ್ ಕುಮಾರ್ ಅಭಿನಯದ ರಾಮ್ ಚಿತ್ರ ಇದೀಗ 125 ದಿನಗಳನ್ನು ಯಶಸ್ವಿಯಾಗಿ ಪೂರೈಸಿದೆ. ಬೆಂಗಳೂರಿನ ಸಾಗರ್ ಚಿತ್ರಮಂದಿರದಲ್ಲಿ ಪ್ರದರ್ಶನವಾಗುತ್ತಿದ್ದ ರಾಮ್ ಚಿತ್ರವನ್ನೀಗ ಸ್ವಪ್ನಾ ಚಿತ್ರಮಂದಿರಕ್ಕೆ ಸ್ಥಲಾಂತರಿಸಲಾಗಿದ್ದು, ಈಗಾಗಲೇ 25 ವಾರಗಳ ಯಶಸ್ವಿ ಪ್ರದರ್ಶನವನ್ನು ಪೂರೈಸಿದೆ. ಆ ಮೂಲಕ ಸೋಲಿನ ಸುಳಿಯಲ್ಲೇ ಇರುವ ಕನ್ನಡ ಚಿತ್ರರಂಗಕ್ಕೆ ಪುನೀತ್ ಚಿತ್ರಗಳು ಕೊಂಚ ಗೆಲುವಿನ ನಗೆ ಬೀರುವಂತೆ ಮಾಡಿವೆ ಎಂದರೂ ತಪ್ಪಲ್ಲ.
ಪುನೀತ್ ಹಾಗೂ ಪ್ರಿಯಾಮಣಿ ಜೋಡಿಯ ಈ ಚಿತ್ರದ ಹಾಡುಗಲು ಈಗಾಗಲೇ ಸಾಕಷ್ಟು ಜನಪ್ರಿಯವಾಗಿವೆ. ಹೊಸ ಗಾನಾ ಬಜಾನಾ.. ಎಂಬ ಹಾಡಂತೂ ಸದ್ಯ ಭಾರೀ ಜನಪ್ರಿಯಗೊಂಡ ಹಾಡುಗಳ ಪೈಕಿ ಒಂದಾಗಿದೆ.
ಜೇಕಬ್ ವರ್ಗೀಸ್ ನಿರ್ದೇಶನದ ಪುನೀತ್ ಅಭಿನಯದ ಮತ್ತೊಂದು ಚಿತ್ರ ಪೃಥ್ವಿ ಕೂಡಾ 50 ದಿನಗಳ ಕಾಲ ಓಡಿದ್ದು ನಿರ್ಮಾಪಕರಿಗೆ ಮೋಸ ಮಾಡಿಲ್ಲ. ರಾಜ್ಯದ 44 ಚಿತ್ರಮಂದಿರಗಳಲ್ಲಿ ಈ ಚಿತ್ರ ಅರ್ಧ ಶತಕ ಬಾರಿಸಿದೆ. ಒಟ್ಟಾರೆ, ಕನ್ನಡ ಚಿತ್ರರಂಗದಲ್ಲಿ ಪುನೀತ್ ಚಿತ್ರಗಳು ಯಾವತ್ತೂ ನಿರ್ಮಾಪಕರಿಗೆ ಮೋಸ ಮಾಡೋದಿಲ್ಲ ಎಂಬ ಮಾತೀಗ ಮತ್ತೊಮ್ಮೆ ಸಾಬೀತಾಗಿದೆ.