ಅಪ್ಪು ಪಪ್ಪು ಹಿರಿ ತರೆಯ ಮೇಲೆ ಮಿಂಚಲು ಅತಿ ಶೀಘ್ರವೇ ಬರಲಿದ್ದಾರೆ ಎನ್ನುವ ಸೂಚನೆ ಸಿಕ್ಕಿದೆ. ಚಿಂಪಾಂಜಿ ಹಾಗೂ ಮಗುವಿನ ನಡುವಿನ ಸ್ನೇಹ, ಬಾಂಧವ್ಯ, ಆತ್ಮೀಯತೆ, ಪ್ರೀತಿ, ಪರಸ್ಪರ ಅವಲಂಬನೆಯನ್ನು ವಿಷಯ ವಸ್ತುವಾಗಿಸಿಕೊಂಡಿರುವ ಈ ಚಿತ್ರ ಮಕ್ಕಳನ್ನು ಸೆಳೆಯುವ ಉದ್ದೇಶದಿಂದಲೇ ಸಿದ್ಧವಾಗುತ್ತಿದೆ.
ಸೌಂದರ್ಯ ಜಗದೀಶ್ ಹಾಗೂ ವಿಜಯ್ ಕಿರಣ್ ನಿರ್ಮಿಸುತ್ತಿರುವ ಈ ಜೀವನ ಸಾಹಸ ಕಥೆಯ ರೀರೆಕಾರ್ಡಿಂಗ್ ಕಾರ್ಯ ಸಹ ಕಳೆದ ವಾರ ಮುಗಿದಿದೆ. ಹಂಸಲೇಖ ಸ್ಟುಡಿಯೋದಲ್ಲಿ ಇದು ಪೂರ್ಣಗೊಂಡಿದೆ. ಮಕ್ಕಳ ಬಗ್ಗೆ ಅಪಾರ ಆಸಕ್ತಿ ಹೊಂದಿರುವ ಸಂಗೀತ ನಿರ್ದೇಶಕ ಹಂಸಲೇಖ ಸಾಕಷ್ಟು ಒತ್ತಡದ ಕೆಲಸದ ನಡುವೆಯೂ, ಈ ಚಿತ್ರಕ್ಕೆ ಅತ್ಯುತ್ತಮ ಸಂಗೀತ ಪೋಣಿಸಿದ್ದಾರೆ.
ಚಿತ್ರ ನಿರ್ಮಾಪಕ ಜಗದೀಶ್ ಅವರ ಪುತ್ರ ಮಾಸ್ಟರ್ ಸ್ನೇಹಿತ್ ಜತೆ ಕಾಂಬೋಡಿಯಾದ ಒರಾಂಗಟಾನ್ ಎಂಬ ಚಿಂಪಾಂಜಿ ಈ ಚಿತ್ರದ ಸಂಪೂರ್ಣ ಹೈಲೈಟ್. ಉಳಿದ ಪಾತ್ರಗಳು ಇವರ ಸುತ್ತ ಸುತ್ತುತ್ತವೆ. ಇವರಿಬ್ಬರ ನಡುವಿನ ಬಾಂಧವ್ಯವನ್ನು ಒಂದು ಸಾಹಸ ಚಿತ್ರವಾಗಿ ಸಿದ್ಧಪಡಿಸಲಾಗುತ್ತಿದೆ. ಇದನ್ನು ಛಾಯಾಗ್ರಾಹಕ ಎಸ್. ಕೃಷ್ಣ ಅತ್ಯುತ್ತಮವಾಗಿ ಸೆರೆಹಿಡಿದಿದ್ದಾರೆ.
ಚಿತ್ರದ ಚಿತ್ರೀಕರಣ ಕಾಂಬೋಡಿಯದಲ್ಲಿ 35 ದಿನಗಳ ಕಾಲ ನಡೆದಿದೆ. ಉಳಿದ ಭಾಗದ ಚಿತ್ರೀಕರಣ ನಗರದ ಕೆಲ ಭಾಗದಲ್ಲಿ ನಡೆಯಲಿದೆ. ಬಹು ದಿನದ ನಂತರ ನಟ ಅಬ್ಬಾಸ್ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇವರೊಂದಿಗೆ ರೇಖಾ, ಕೋಮಲ್, ರಂಗಾಯಣ ರಘು, ಜೆನಿಫರ್ ಮತ್ತಿತರರು ತಾರಾಗಣದಲ್ಲಿ ಇದ್ದಾರೆ. ಚಿತ್ರಕ್ಕೆ ಆರ್. ಅನಂತರಾಮ್ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದು, ರಾಮ್ ನಾರಾಯಣ್ ಸಾಹಿತ್ಯ ರಚಿಸಿದ್ದಾರೆ.