ಮುಂದಿನ ಚಿತ್ರ ಯಾವುದು ಸ್ವಾಮಿ ಅಂದರೆ ನಮ್ಮ ಬಿ.ಸಿ. ಪಾಟೀಲರು ಕಥೆ ಬರಿತಾ ಇದೀನಿ ಅನ್ನೊದಾ? ಇದೇನು ಸ್ವಾಮಿ ನಟನೆ ಬಿಟ್ಟು ಇಟ್ರಾ ಅಂದ್ರೆ, ಇದು ನನಗಾಗಿ ಮಾಡಿಕೊಳ್ಳುತ್ತಿರುವ ಚಿತ್ರ. ಇದು ಮಲ್ಟಿ ಸ್ಟಾರ್ ಚಿತ್ರ ಆಗಿದ್ದು, ಕಥೆಗೆ ಹೊಂದುವವರನ್ನು ಆಯ್ಕೆ ಮಾಡಿಕೊಂಡು ಚಿತ್ರ ಮಾಡ್ತೇನೆ ಅಂತಾರೆ.
ನೆರೆ ಹಾವಳಿ ಸಂದರ್ಭದಲ್ಲಿ ಬಿಡುಗಡೆ ಆದ ಕಾರಣ ತಮ್ಮ ಸೆಲ್ಯೂಟ್ ನಿತ್ರಕ್ಕೆ ಜನ ದೊಡ್ಡ ಸೆಲ್ಯೂಟನ್ನೇ ಹೊಡೆದರು. ಇದರಿಂದ ಚಿತ್ರ ಓಡಲಿಲ್ಲ. ಮುಂದೆ ಹೀಗಾಗುವುದಿಲ್ಲ. ನಾನು ರಾಜಕಾರಣಿಯಾಗಿರಬಹುದು. ಆದರೆ ನನ್ನಲ್ಲೊಬ್ಬ ಕಲಾತ್ಮಕ ವ್ಯಕ್ತಿ ಇದ್ದಾನೆ. ನನ್ನಲ್ಲಿರುವ ಪ್ರತಿಭೆಯ ಅನಾವರಣಕ್ಕೆ ನಾನು ಚಿತ್ರರಂಗಕ್ಕೆ ಬಂದೆ. ಅಗತ್ಯ ಅಥವಾ ಅನಿವಾರ್ಯವನ್ನು ಆಧರಿಸಿ ಅಲ್ಲ. ನಟಿಸಲು ಚಿತ್ರ ಮಾಡ್ತೇನೆ, ಹಣಕ್ಕಾಗಿ ಅಲ್ಲ ಅನ್ನುತ್ತಾರೆ.
ಚಿತ್ರ ಹಾಗೂ ರಾಜಕಾರಣ ನನ್ನ ಪಾಲಿಗೆ ತಂದೆ ತಾಯಿ ಇದ್ದಂತೆ. ಇವರಲ್ಲಿ ಯಾರು ಬೇಕು ಎಂದು ಕೇಳಿದರೆ ನಿರ್ಧರಿಸುವುದು ಕಷ್ಟ. ಇಬ್ಬರೂ ಬೇಕು ಅನ್ನುತ್ತೇನೆ. ಏಕೆಂದರೆ ಇವೆರಡನ್ನೂ ಬಿಟ್ಟು ನನ್ನಿಂದ ಇರಲಾಗದು ಎನ್ನುತ್ತಾರೆ. ಚಿತ್ರ ಬದುಕಿನಿಂದ ರಾಜಕೀಯಕ್ಕೆ ಬಂದಿರುವುದರಿಂದ ಚಿತ್ರರಂಗದ ಯಶಸ್ಸು ಗೆಲುವಿನಲ್ಲಿ ಪಾತ್ರ ವಹಿಸಬಹುದು. ಆದರೆ ರಾಜಕೀಯ ಚಿತ್ರ ಬದುಕಿನಂತೆ ಇಲ್ಲ. ಇದೊಂದು ಪ್ರತ್ಯೇಕ ಲೋಕ ಎನ್ನುತ್ತಾರೆ.
ರಾಜಕೀಯ ಭವಿಷ್ಯದಲ್ಲಿ ನನಗೂ ಒಮ್ಮೆ ಮುಖ್ಯಮಂತ್ರಿ ಆಗಬೇಕು ಅಂತ ಇದೆ. ಅದೇ ರೀತಿ ಚಿತ್ರರಂಗದಲ್ಲೂ ಒಂದಿಷ್ಟು ಒಳ್ಳೆಯ ಸಿನಿಮಾ ತೆಗೆಯಬೇಕು ಅಂತ ಅಂದುಕೊಂಡಿದ್ದೇನೆ ಅನ್ನುತ್ತಾರೆ. ಅವರು ಸಿಎಂ ಆಗಿ ಚಿತ್ರರಂಗದಲ್ಲೂ ಯಶ ಕಾಣಲಿ ಅಂತ ಆಶಿಸೋಣ.