ವಿಜಯ ರಾಘವೇಂದ್ರ ಅಭಿನಯದ ವಿನಾಯಕ ಗೆಳೆಯರ ಬಳಗ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಕ್ಲೈಮ್ಯಾಕ್ಸ್ ಹಾಡಿನ ಚಿತ್ರೀಕರಣ ನಡೆಯುತ್ತಿದೆ. ಕಳೆದ 25 ದಿನಗಳಿಂದ ದೊಡ್ಡಬಳ್ಳಾಪುರದಲ್ಲಿ ಅಂತಿಮ ಹಂತದ ಚಿತ್ರೀಕರಣ ನಡೆಸುತ್ತಿರುವ ಚಿತ್ರತಂಡ ಕ್ಲೈಮ್ಯಾಕ್ಸ್ ಹಾಡನ್ನು ಅತ್ಯಂತ ವಿಶಿಷ್ಟವಾಗಿ ಚಿತ್ರೀಕರಿಸಿದೆಯಂತೆ.
ನಿರಂತರ ಚಿತ್ರೀಕರಣ ನಡೆಸುತ್ತಿರುವ ತಂಡದಲ್ಲಿ ಒಂದಿಷ್ಟು ಸುಸ್ತಿದ್ದರೂ, ಹಾಡಿನ ಚಿತ್ರೀಕರಣದಲ್ಲಿ ಲವಲವಿಕೆ ಎದ್ದು ಕಾಣುತ್ತಿತ್ತು. ನಾಗೇಂದ್ರ ಪ್ರಸಾದ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರ ಸಾಕಷ್ಟು ಭರವಸೆ ಹಾಗೂ ನಿರೀಕ್ಷೆ ಹೊತ್ತು ಬರಲಿದೆಯಂತೆ.
ಚಿತ್ರದ ಆರಂಭವನ್ನು ಗಣೇಶ ಸ್ತುತಿ, ಪೂಜೆಯೊಂದಿಗೆ ಮಾಡುವುದು ವಾಡಿಕೆ. ಆದರೆ ವಿನಾಯಕ ಗೆಳೆಯರ ಬಳಗದ ಹೆಸರಿನಲ್ಲೇ ಗಣೇಶ ಇರುವುದರಿಂದ ಚಿತ್ರದ ಚಿತ್ರೀಕರಣ ಅಂತ್ಯವನ್ನು ಗಣೇಶ ಸ್ತುತಿಯೊಂದಿಗೆ ಪೂರ್ಣಗೊಳಿಸಲಾಯಿತು.
ದೊಡ್ಡಬಳ್ಳಾಪುರ ಗ್ರಾಮದ ತುಂಬಾ ತಳಿರು ತೋರಣ ಕಟ್ಟಿ 108 ವಿನಾಯಕ ವಿಗ್ರಹಗಳನ್ನು ಪ್ರತಿಷ್ಠಾಪಿಸಿ ನೂರಾರು ಗ್ರಾಮಸ್ಥರ ನಡುವೆ ಹಾಡು ಹಾಗೂ ಮಾತಿನ ಭಾಗದ ಚಿತ್ರೀಕರಣವನ್ನು ನಡೆಸಲಾಯಿತು. ಇದು ಎರಡು ರಾತ್ರಿ ಹಾಗೂ ಒಂದು ಹಗಲು ನಿರಂತರವಾಗಿ ನಡೆಯಿತು. ಜಾತಿ ಬೇಧ ಮರೆತು ಗ್ರಾಮಸ್ಥರು ಈ ಹಾಡಿತ ಚಿತ್ರೀಕರಣದಲ್ಲಿ ಪಾಲ್ಗೊಂಡರು. ಚಿತ್ರದ ಇನ್ನುಳಿದ ಕೆಲಸ ನಗರದಲ್ಲಿ ನಡೆಯಲಿದ್ದು, ಚಿತ್ರತಂಡ ಅಲ್ಲಿಂದ ಗಂಟೂಮೂಟೆ ಕಟ್ಟಿದೆ. ಮುಂದಿನ ಹಾಗೂ ಅಂತಿಮ ಹಂತದ ಚಿತ್ರದ ಶೂಟಿಂಗ್ ನಡೆಸುವ ಸಲುವಾಗಿ ಕೆಲವೇ ದಿನದ ವಿಶ್ರಾಂತಿಯ ನಂತರ ತಂಡ ಸಜ್ಜಾಗಲಿದೆ. ಒಟ್ಟಾರೆ ಗಣೇಶ ಚತುರ್ಥಿ ಹೊತ್ತಿಗೆ ಚಿತ್ರ ತೆರೆಗೆ ಬರಲಿದೆ ಎಂದು ಹೇಳಲಾಗುತ್ತಿದೆ.