ಹಿಂದೆ ಬಂದ ಮುಂಗಾರು ಮಳೆ ಹಾಗೂ ಮುಂದೆ ಬರಲಿರುವ ಮತ್ತೆ ಮುಂಗಾರು ನಡುವೆ ಸಾಕಷ್ಟು ಸಾಮ್ಯತೆ ಇದೆ ಅಂತ ಹೇಳುತ್ತಲೇ ಬಂದಿದ್ದೆವು, ಇದೀಗ ಅದಕ್ಕೆ ಇನ್ನೊಂದು ಸಾಕ್ಷಿ ಲಭಿಸಿದೆ. ಚಿತ್ರದ ಅಂದಿನ ಹಾಗೂ ಇಂದಿನ ನಟಿಯರು ಒಂದೇ ಊರಿನವರು.
ಹೌದು, ಮುಂಗಾರು ಮಳೆಯಲ್ಲಿ ನಾಯಕಿಯಾಗಿದ್ದ ಪೂಜಾಗಾಂಧಿ ಹಾಗೂ ಮತ್ತೆ ಮುಂಗಾರು ಚಿತ್ರಕ್ಕೆ ನಾಯಕಿಯಾಗಿರುವ ರಚನಾ ಮಲ್ಹೋತ್ರಾ ಇಬ್ಬರೂ ಒಂದೇ ಊರಿನವರು. ಹುಟ್ಟಿದ್ದು ದಿಲ್ಲಿಯಲ್ಲಿ, ಬೆಳೆದಿದ್ದು ಮುಂಬೈನಲ್ಲಿ. ಹಿಂದೆ ಪೂಜಾ ಹಿಡಿದ ಮಾರ್ಗದಲ್ಲೇ ಇವರು ಚಿತ್ರರಂಗ ಪ್ರವೇಶಿಸಿದ್ದಾರೆ. ಮುಂಗಾರು ಮಳೆ ಪೂಜಾಗೆ ಚಿತ್ರರಂಗದಲ್ಲಿ ಸ್ಥಾನ ನೀಡಿದಂತೆ ಮತ್ತೆ ಮುಂಗಾರು ತಮ್ಮನ್ನು ಸಲಹುತ್ತದೆ ಎನ್ನುವ ಅದಮ್ಯ ವಿಶ್ವಾಸ ರಚನಾರದ್ದು.
ಅಂದು ಪೂಜಾ ಇಂದು ರಚನಾ ಅಂತ ಯಾಕೆ ಆಗಬಾರದು ಅಂತ ಕೇಳುವ ರಚನಾಗೆ ಚಿತ್ರದಲ್ಲಿ ಸಿಕ್ಕ ಪಾತ್ರವೂ ಹಾಗೆಯೇ ಇದೆಯಂತೆ. ಚಿತ್ರ ಬಿಡುಗಡೆಯ ಹೊತ್ತಿಗೆ ಜನ ತಮ್ಮ ಪ್ರತಿಭೆಯನ್ನು ಗುರುತಿಸಿರುತ್ತಾರೆ ಎಂಬ ವಿಶ್ವಾಸ ಅವರದ್ದು.
ಈಗಾಗಲೇ ವಿಧೇಯುಡು ಎಂಬ ತೆಲುಗು ಚಿತ್ರದಲ್ಲಿ ಅಭಿನಯಿಸಿರುವ ಅನುಭವ ಇರುವ ಇವರಿಗೆ ಕನ್ನಡ ಚಿತ್ರರಂಗ ಹೊಸದು. ಇವರ ಪಾಲಿಗೆ ನಟಿ ಶ್ರೀದೇವಿ ಆದರ್ಶವಂತೆ. ಶ್ರೀದೇವಿ ಮಾಡಿದಂತೆ ಎಲ್ಲಾ ವಿಧದ ಪಾತ್ರವನ್ನೂ ಮಾಡುವುದು ಇವರ ಆಶಯವಂತೆ. ಇದೆಲ್ಲಾ ಸಾಧ್ಯವೇ ಅಂದರೆ 'ಸಾಧ್ಯ ಆಗುತ್ತೋ ಬಿಡುತ್ತೋ, ಆಸೆ ಪಡಲು ಚಿಂತೆ ಇಲ್ಲವಲ್ಲಾ' ಅಂತಾರೆ! ತಾವು ಚಿತ್ರರಂಗಕ್ಕೆ ಬರಲು ಅವರೇ ಕಾರಣ ಅನ್ನುವ ಮಾತನ್ನು ಸಹ ಆಡುತ್ತಾರೆ.
ತಮ್ಮ ಪ್ರತಿಭೆ ಪ್ರದರ್ಶಿಸಲು ಎಂಥ ಪಾತ್ರವನ್ನು ಸಹ ಮಾಡಲು ಸಿದ್ಧ ಅನ್ನುವ ಇವರಿಗೆ ಚಿತ್ರನಗರಿಯವರು ಇನ್ನೆಂತ ಪಾತ್ರಗಳನ್ನು ನೀಡಿ ಪ್ರತಿಭೆ ಪ್ರದರ್ಶಿಸುವಂತೆ ಮಾಡುತ್ತಾರೋ ಕಾದು ನೋಡಬೇಕು.