ಹಲವು ದಿನಗಳ ಹಿಂದೆ ಕನ್ನಡದ ಹುಡುಗರ ನಿದ್ದೆ ಗೆಡಿಸಿ ನಂತರ ಎಲ್ಲೋ ತೆರಳಿದ್ದ ಹರಿಪ್ರಿಯಾ ಮತ್ತೆ ಬರುತ್ತಿದ್ದಾರೆ. ಅದೂ 'ಚೆಲುವೆಯೇ ನಿನ್ನ ನೋಡಲು' ಅನ್ನುವ ಚಿತ್ರದ ಮೂಲಕ. ಹೌದು ನಿಜಕ್ಕೂ ಚೆಲುವಿನ ಖನಿಯಾಗಿರುವ ಹರಿಪ್ರಿಯಾ ಚೆಲುವೆಯೇ ನಿನ್ನ ನೋಡಲು ಚಿತ್ರದಲ್ಲಿ ನಟಿಸಿದ್ದರೂ, ಚಿತ್ರ ಇನ್ನೂ ಬಿಡುಗಡೆಯ ಭಾಗ್ಯ ಕಂಡಿರಲಿಲ್ಲ. ಜಗತ್ತಿನ ಏಳು ಅದ್ಭುತಗಳಲ್ಲೂ ಚಿತ್ರೀಕರಣ ನಡೆಸಿರುವ ಶಿವರಾಜ್ ಕುಮಾರ್ ಅಭಿನಯದ ಈ ಚಿತ್ರದಲ್ಲಿ ಹರಿಪ್ರಿಯಾ ಜೊತೆಗೆ ಸೋನಾಲ್ ಚೌಹಾಣ್ ಎಂಬ ಬಾಲಿವುಡ್ ಬೆಡಗಿಯೂ ನಾಯಕಿಯಾಗಿ ನಟಿಸಿದ್ದಾರೆ.
ಕನ್ನಡದಲ್ಲಿ ಒಂದೆರಡು ಚಿತ್ರ ಮಾಡಿ ಕೈ ಖಾಲಿ ಅಂತ ಅನಿಸಲು ಶುರುವಾದಾಗ ಹೈದ್ರಾಬಾದ್, ಚೆನ್ನೈ ಅಂತ ಸುತ್ತುತ್ತಾ, ಚಿತ್ರ ಬದುಕನ್ನು ಅರಸಿ ಹೊರಟು ಹೋಗಿದ್ದರು. ಕನ್ನಡದಲ್ಲಿ ಆಫರ್ ಕಡಿಮೆ ಆದಾಗೆಲ್ಲಾ ನಟಿಯರು ಮಾಡುವ ಖಾಯಂ ಕೆಲಸ ಇದು. ಇವರ ಕನ್ನಡದ ಚಿತ್ರ ನಂದೇ ಕೂಡಾ ಇನ್ನೂ ಬಿಡುಗಡೆ ಆಗಬೇಕಾಗಿದೆ. ಈ ನಡುವೆ ಚೆಲುವೆಯೇ ನಿನ್ನ ನೋಡಲು ಚಿತ್ರವೂ ಸದ್ಯದಲ್ಲೇ ಬಿಡುಗಡೆಯಾಗಲಿದೆ ಎಂಬ ಮಾತೂ ಕೇಳಿ ಬರುತ್ತಿದೆ.
ತುಂಬಾ ಕ್ರಿಕೆಟ್ ಪ್ರೇಮಿಯಾಗಿರುವ ಇವರು ಕಾಲಿವುಡ್, ಟಾಲಿವುಡ್ ಚಿತ್ರಗಳಲ್ಲಿ ಸಾಕಷ್ಟು ಬ್ಯುಸಿ ಆಗಿದ್ದಾರೆ. ಸದ್ಯ ಅರ್ಜುನ್ ಸರ್ಜಾ ಜತೆ ನಟಿಸಿರುವ ವಲ್ಲಕೋಟ್ಟೆ ಚಿತ್ರ ಇನ್ನೇನು ತೆರೆ ಕಾಣುವ ಹಂತದಲ್ಲಿದೆ. ಸಾಕಷ್ಟು ಕನ್ನಡದ ನಾಯಕಿಯರಂತೆ ನಾನೂ ಸಹ ಅವಕಾಶ ಸಿಕ್ಕಲ್ಲಿ ಚಿತ್ರ ಮಾಡುತ್ತೇನೆ. ಅಲ್ಲಿ ಇಲ್ಲಿ ಅವಕಾಶಕ್ಕಾಗಿ ಅಲೆಯುವುದು ನಮ್ಮ ಭವಿಷ್ಯದ ದೃಷ್ಟಿಯಿಂದ ಅತ್ಯಗತ್ಯ. ಇದು ಸಾಮಾನ್ಯ ಸಂಗತಿ ಎನ್ನುತ್ತಾರೆ ಹರಿಪ್ರಿಯಾ.
ಅಂದೊಮ್ಮೆ ಕನ್ನಡ ಚಿತ್ರರಂಗದಲ್ಲಿ ಕನ್ನಡಿಗರಿಗೆ ಅವಕಾಶವೇ ಇಲ್ಲ ಎಂದು ಸಿಕ್ಕಾಪಟ್ಟೆ ದೂರಿದ್ದ ಹರಿಪ್ರಿಯಾ ಈಗ ಕಲಾವಿದರಿಗೆ ಭಾಷೆಯ ಹಂಗಿಲ್ಲ ಅನ್ನುತ್ತಾ ಟಾಲಿವುಡ್ ಕಾಲಿವುಡ್ ಚಿತ್ರಗಳ ಉತ್ತಮ ಆಫರ್‌ಗಳಿಗಾಗಿ ಕಾಯುತ್ತಿದ್ದಾರೆ ಎಂದರೂ ಸುಳ್ಳಲ್ಲ. ಒಟ್ಟಾರೆ ಚಿತ್ರ ಬದುಕಿನ ಹಲವು ಮಜಲುಗಳನ್ನು ಕಂಡಿರುವ ಈ ನಟಿಗೆ ಕನ್ನಡದಲ್ಲೂ ಯಶಸ್ಸು ಸಿಗಲಿ ಅಂತ ಆಶಿಸೋಣ.