ತಮಿಳು, ತೆಲುಗು, ಮಲಯಾಳಂ ಚಿತ್ರಗಳಲ್ಲಿ ಅಭಿನಯಿಸಿ ಅನುಭವ ಹೊಂದಿರುವ ಮೇಘನಾರಾಜ್ ಇದೀಗ ಕನ್ನಡಕ್ಕೆ ಬರುತ್ತಿದ್ದಾರೆ. ಅದೂ ಪುಂಡನ ನಾಯಕಿಯಾಗಿ. ಹೌದು. ಈ ವಾರ ತೆರೆಕಾಣುತ್ತಿರುವ ಯೋಗೀಶ್ ಅಭಿನಯದ ಅತ್ಯಂತ ಮಹತಾಕಾಂಕ್ಷೆಯ ಚಿತ್ರ ಪುಂಡನ ನಾಯಕಿಯಾಗಿ ಇವರು ಕನ್ನಡದಲ್ಲಿ ಮೊದಲ ಬಾರಿಗೆ ನಟಿಸುತ್ತಿದ್ದಾರೆ.
ಇವರು ಕನ್ನಡಕ್ಕೆ ಬಂದಿರುವುದರಲ್ಲಿ ಅಚ್ಚರಿ ಏನು ಅನ್ನುತ್ತಿದ್ದೀರಾ? ಹೌದು ಸ್ವಾಮಿ. ಇವರು ಮೂಲತಃ ಕನ್ನಡದವರು. ನಟ ಸುಂದರ್ ರಾಜ್ ಹಾಗೂ ನಟಿ ಪ್ರಮಿಳಾ ಜೋಷಾಯ್ ಅವರ ಪುತ್ರಿ. ಯುವ ಪೀಳಿಗೆಗೆ ನೈಜತೆಯನ್ನು ತಿಳಿಸುವ ಈ ಚಿತ್ರದ ಮೂಲಕ ತಮ್ಮ ಕನ್ನಡ ಚಿತ್ರರಂಗ ಪ್ರವೇಶ ಆಗುತ್ತಿರುವ ಬಗ್ಗೆ ಅವರಿಗೆ ಹೆಮ್ಮೆ ಇದೆಯಂತೆ.
ಈವರೆಗೆ ನಾನು ಕೆಲವು ಚಿತ್ರಗಳಲ್ಲಿ ನಟಿಸಿರಬಹುದು. ಆದರೆ ಅವೆಲ್ಲಾ ಬೇರೆ ಭಾಷೆಯವು. ಆದರೆ ಈ ಬಾರಿ ನಟಿಸಿರುವುದು ಕನ್ನಡದಲ್ಲಿ. ನಾವು ಹುಟ್ಟಿ ಬೆಳೆದ ಭಾಷೆಯಲ್ಲಿ ನಟಿಸೋದು ಅಂದ್ರೆ ಯಾಕೋ ಒಂಥರಾ ಹೆಚ್ಚು ಖುಷಿ, ಸಂಭ್ರಮ. ಹಾಗಾಗಿ ಪುಂಡ ಚಿತ್ರದ ಬಗ್ಗೆ ಈವರೆಗೆ ನಾನು ಎಂದೂ ಕಾಣದ ಖುಷಿ ಅನುಭವಿಸುತ್ತಿದ್ದೇನೆ. ಇಡೀ ಚಿತ್ರತಂಡ ಒಂದು ಕುಟುಂಬದಂತೆ ಇತ್ತು. ಎಲ್ಲರೂ ಉತ್ತಮವಾಗಿ ಕಾರ್ಯ ನಿರ್ವಹಿಸಿದರು. ಕನ್ನಡದಲ್ಲಿ ಅಭಿನಯಿಸಿದ್ದಕ್ಕೆ ಖುಶಿಯಿದೆ. ಆದರೆ, ಚಿತ್ರವನ್ನು ಜನ ಹೇಗೆ ಸ್ವೀಕರಿಸುತ್ತಾರೋ ಅನ್ನುವ ಭಯವೂ ಇದೆ ಎನ್ನುತ್ತಾರೆ.
ಅವಕಾಶಗಳು ಕನ್ನಡದಲ್ಲೂ ಬಂದವು. ಆದರೆ ಅಗ ನಾನು ಓದುತ್ತಿದ್ದೆ. ಓದು ಮುಗಿಯುತ್ತಿದ್ದಂತೆ ಪರಭಾಷಾ ಚಿತ್ರ ಅವಕಾಶ ನೀಡಿತು. ಮಾಡಿದೆ. ಸಣ್ಣ ಅವಕಾಶ ಸಿಕ್ಕರೂ ಕನ್ನಡದಲ್ಲಿ ಮಾಡುವ ಅಂತ ಅಂದುಕೊಂಡಿದ್ದೆ. ಆದರೆ ಒಳ್ಳೆ ಅವಕಾಶವೇ ಸಿಕ್ಕಿದೆ ಎಂದು ಖುಷಿಯಿಂದ ಹೇಳುತ್ತಾರೆ ಮೇಘನಾ ರಾಜ್