ಸಾಲು ಸಾಲು ಸೋಲಿನಿಂದ ಕಂಗೆಟ್ಟಿರುವ ನಮ್ಮ ಲೂಸ್ ಮಾದ ಅಲಿಯಾಸ್ ಯೋಗೀಶ್ ಮಹತ್ವಾಕಾಂಕ್ಷೆಯ ಮತ್ತೊಂದು ಚಿತ್ರ ರೆಡಿಯಾಗಿದೆ. ಅದೇ ಪುಂಡ.
ಅದು ಈ ವಾರ ತೆರೆ ಕಾಣುತ್ತಿದೆ. ಇದು ಪುಂಡಾಟಿಕೆಯ ಚಿತ್ರ. ನಾಯಕನಿಗೆ ಒಂದು ಬೈಕ್ ಕೊಳ್ಳುವ ಆಸೆ ಇರುತ್ತದೆ. ತಂದೆ ತಾಯಿಯ ಬಳಿ ಗಲಾಟೆ ಮಾಡಿ ಒಂದು ಬೈಕ್ ಕೊಳ್ಳುತ್ತಾನೆ. ಅದು ಬಂದ ನಂತರ ಅವನ ಜೀವನದಲ್ಲಿ ಹಲವು ಬದಲಾವಣೆ ಆಗುತ್ತಾ ಹೋಗುತ್ತದೆ. ಬೈಕ್ ಓಡಿಸಲು ಹಣ ಬೇಕು ಅದಕ್ಕೊಂದು ಕೆಲಸ ಬೇಕು. ಬೈಕಿನಲ್ಲಿ ಒಬ್ಬನೇ ಹೋಗಲು ಸಾಧ್ಯವೇ? ಹಿಂದೊಂದು ಹುಡುಗಿ ಬೇಡವೇ? ಅದೆಲ್ಲ ಅಗತ್ಯ ಪೂರೈಸಿಕೊಳ್ಳಬೇಕು. ಇದಕ್ಕಾಗಿ ಏನೆಲ್ಲಾ ಹರ ಸಾಹಸ ಪಡಬೇಕೋ ಅದೆಲ್ಲಾ ಈ ಚಿತ್ರದಲ್ಲಿ ಇದೆ.
ಪುಂಡನಾಗಿ ಚಿತ್ರ ಆರಂಭಿಸುವ ಯೋಗೀಶ್ ನಂತರ ಅದೆಷ್ಟು ಬದಲಾಗುತ್ತಾನೆ, ಕೊನೆಯಲ್ಲಿ ಎಲ್ಲವನ್ನೂ ಉಳಿಸಿಕೊಳ್ಳಲು ಏನು ಮಾಡುತ್ತಾನೆ ಎನ್ನುವುದು ಚಿತ್ರದ ಸಾರಾಂಶ. ಇದರಲ್ಲೇ ಹಾಸ್ಯ, ಹಾಡು, ಭಾವನಾತ್ಮಕ ಸನ್ನಿವೇಶ, ಹೊಡೆದಾಟ, ನಾಯಕಿಯೊಂದಿಗೆ ಸರಸ, ಬೈಕಿನಲ್ಲಿ ಜಾಲಿ ರೈಡ್ ಎಲ್ಲವೂ ಇದೆ.
ಎಚ್. ವಾಸು ಚಿತ್ರದ ನಿರ್ದೇಶಕರು. ಪ್ರಮೀಳಾ ಜೋಷಾಯ್ ಹಾಗೂ ಸುಂದರ್ ರಾಜ್ ತಾರಾ ದಂಪತಿಗಳ ಮಗಳಾದ ನಟಿ ಮೇಘನಾ ರಾಜ್ ಚಿತ್ರದ ನಾಯಕಿ. ಪ್ರಕಾಶ್ ಸಂಕಲನ, ಕೇಶವ್ ಚಂದ್ರ ಛಾಯಾಗ್ರಹಣ ಚಿತ್ರಕ್ಕೆ ಲಭಿಸಿದೆ. ಒಟ್ಟಾರೆ ಉತ್ತಮ ಚಿತ್ರ ತಂಡ ಹೊಂದಿರುವ ಈ ಸಿನಿಮಾದಲ್ಲಿ ನಟ ಅವಿನಾಶ್ ಸಹ ಇದ್ದಾರೆ.
ಊರೂರು ಅಲೆದುಕೊಂಡಿರುವ ಹುಡುಗನೊಬ್ಬ ಬೈಕ್ ಬಂದ ನಂತರ ಹೇಗೆ ಬದಲಾಗುತ್ತಾನೆ ಎನ್ನುವುದು ಈ ಚಿತ್ರದಲ್ಲಿದೆ. ಒಂದು ಪಕ್ಕಾ ಲವ್ ಕಂ ಟಪೋರಿ ಚಿತ್ರ ಇದು ಎನ್ನಲು ಸಂಶಯವೇ ಇಲ್ಲ. ಇದೇ ಶುಕ್ರವಾರ ಚಿತ್ರ ತೆರೆ ಕಾಣುತ್ತಿದೆ. ನೋಡಿ ಅನುಭವಿಸಿ. ಅಂದಹಾಗೆ ಕೊನೆಗೆ, ಈ ಚಿತ್ರ ತಮಿಳಿನ ಪೊಳ್ಳಾದವನ್ ಚಿತ್ರದ ರಿಮೇಕ್ ಅಂತ ವಿವರಿಸಿ ಹೇಳುವ ಅಗತ್ಯವೇ ಇಲ್ಲ. ತಮಿಳಿನಲ್ಲಿ ಈ ಚಿತ್ರದಲ್ಲಿ ಧನುಷ್ ಹಾಗೂ ನಮ್ಮ ಕನ್ನಡತಿ ರಮ್ಯಾ ಅಭಿನಯಿಸಿದ್ದರು.