ನಿಧಿ ಸುಬ್ಬಯ್ಯ ಇದೀಗ 'ಹುಡುಗರು ಬೇಕು ಕುರಿಯ ಮರಿ ಥರ...' ಎಂದು ಹಾಡುತ್ತಿದ್ದಾರೆ. ಇವರಿಗ್ಯಾಕೆ ಕುರಿ ಮರಿ ಥರದ ಹುಡುಗ್ರು ಬೇಕಪ್ಪಾ ಅಂತ ಮೂಗಿನ ಮೇಲೆ ಬೆರಳಿಡಬೇಡಿ. ನಮ್ಮ ಮುಂಗಾರು ಮಳೆಯ ಯೋಗರಾಜ ಭಟ್ಟರು ನಿಧಿ ಸುಬ್ಬಯ್ಯರಿಗೆ ಕುರಿ ಮರಿ ಸಹವಾಸ ಮಾಡಲು ಹೇಳಿದ್ದಾರಂತೆ. ಒಂದಕ್ಕೆ ಒಂದು ಸಂಬಂಧ ತಿಳಿಯುತ್ತಿಲ್ಲವಲ್ಲ ಅಂತೀರಾ..? ಹಾಗಾದರೆ ಇಲ್ಲಿ ಕೇಳಿ.
ಯೋಗರಾಜ್ ಭಟ್ಟ ಹೊಸ ಚಿತ್ರ 'ಪಂಚರಂಗಿ'ಯ ಹಾಡುಗಳ ಚಿತ್ರೀಕರಣ ನಗರದಲ್ಲಿ ಭರದಿಂದ ಸಾಗಿದೆ. ನಿರ್ದೇಶಕರಾದ ಭಟ್ಟರೇ ಬರೆದಿರುವ 'ಹುಡುಗರು ಬೇಕು ಕುರಿಯ ಮರಿ ತರ ಹುಡುಗರು ಬೇಕು. ನಾವು ರೆಡಿ ನಾವು ರೆಡಿ...' ಹಾಡು ಇತ್ತೀಚೆಗೆ ಅಬ್ಬಾಯಿ ನಾಯ್ಡು ಸ್ಟುಡಿಯೋದಲ್ಲಿ ನಡೆಯಿತು. ಈ ಹಾಡಿಗೆ ಶಶಿಧರ್ ಅಡಪ ಉತ್ತಮ ಸೆಟ್ ಸಿದ್ಧಪಡಿಸಿದ್ದರು. ನಿಧಿ ಸುಬ್ಬಯ್ಯ ಹಾಗೂ 24 ಮಂದಿ ಸಹಕಲಾವಿದರು ಈ ನೃತ್ಯಕ್ಕೆ ಹೆಜ್ಜೆ ಹಾಕಿದರು. ಶಂಕರ್ ಈ ಹಾಡಿಗೆ ನೃತ್ಯ ಸಂಯೋಜನೆ ಮಾಡಿದ್ದರು.
ಇದಲ್ಲದೇ ದಿಗಂತ್ ಹಾಗೂ ಸಹಕಲಾವಿದರ ಅಭಿನಯದಲ್ಲಿ ಬರುವ 'ಪಂಚರಂಗಿ ಹಾಡುಗಳು ಪಂಚರಂಗಿ ಟೈರುಗಳು, ಏಳೋ ಎಂಟೋ ಸ್ವರಗಳು ಎಲ್ಲಾ ಬಿಟ್ಟಿ ಪದಗಳು' ಎಂಬ ಚಿತ್ರದ ಇನ್ನೊಂದು ಗೀತೆ ಎಚ್ಎಸ್ಆರ್ ಲೇಓಟಿನ ನ್ಯಾಷಮಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಚಿತ್ರೀಕರಣಗೊಂಡಿತು.
ಯೋಗರಾಜ್ ಮೂವೀಸ್ ಎಂಬ ಹೊಸ ಸಂಸ್ಥೆ ಹುಟ್ಟು ಹಾಕಿರುವ ಭಟ್ಟರು ಅದರ ಮೂಲಕ ಹೊರತರುತ್ತಿರುವ ಮೊದಲ ಚಿತ್ರ ಪಂಚರಂಗಿ. ಎಂ.ಕೆ. ಸುಬ್ರಹ್ಮಣ್ಯ ಈ ಚಿತ್ರ ನಿರ್ಮಾಣದಲ್ಲಿ ಭಟ್ಟರೊಂದಿಗೆ ಭಾಗಿಯಾಗಿದ್ದಾರೆ. ಪವನ್ ಕುಮಾರ್ಅವರೊಂದಿಗೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿರುವ ಭಟ್ಟರು, ನಿರ್ದೇಶನವನ್ನು ಖುದ್ದು ವಹಿಸಿಕೊಂಡಿದ್ದಾರೆ. ಮನೋಮೂರ್ತಿ ಸಂಗೀತ, ತ್ಯಾಗರಾಜನ್ ಛಾಯಾಗ್ರಹಣ, ಜೋನಿಹರ್ಷ ಸಂಕಲನ, ಶಶಿಧರ್ ಅಡಪ ಕಲಾ ನಿರ್ದೇಶನ, ಶಶಿಧರ್ ನೃತ್ಯ ನಿರ್ದೇಶನ ಇರುವ ಈ ಚಿತ್ರದಲ್ಲಿ ದಿಗಂತ್ ನಿಧಿ ಸುಬ್ಬಯ್ಯ ಜತೆ ಅನಂತನಾಗ್, ರಾಜು ತಾಳಿಕೋಟೆ, ಪವನ್ ಕುಮಾರ್, ಸುಂದರರಾಜ್, ಪದ್ಮಜಾರಾವ್, ಸುಧಾ ಬೆಳವಾಡಿ, ರಮ್ಯಾ ಬಾರ್ನಾ ಮುಂತಾದವರು ಇದ್ದಾರೆ.