ಉತ್ತಮ ಹೆಸರಿನ ಚಿತ್ರವೊಂದು ಆರಂಭಕ್ಕೆ ಮುನ್ನವೇ ಸುದ್ದಿಯಾಗುತ್ತದೆ. ಹೌದು, 'ಪ್ರೇಮ ಚಂದ್ರಮ' ಚಿತ್ರದ ಸ್ಥಿತಿಯೀಗ ಅಯೋಮಯವಾಗಿದೆ. ಮೊನ್ನೆಯಷ್ಟೇ ಈ ಚಿತ್ರಕ್ಕೆ ಆಯ್ಕೆಯಾಗಿದ್ದ ನಟಿ ನಿಖಿತಾ ತನ್ನ ಮತ್ತೊಂದು ಚಿತ್ರದ ಶೂಟಿಂಗ್ ಕಾರಣವೊಡ್ಡಿ ಚಿತ್ರಕ್ಕೆ ಬೈ ಬೈ ಹೇಳಿದ್ದರು. ಅದಾಗಿ ಒಂದು ದಿನವಾಗುವ ಹೊತ್ತಿಗೆ ನಾಯಕ 'ನೆನಪಿರಲಿ' ಖ್ಯಾತಿಯ ಪ್ರೇಮ್ ಕೂಡಾ ಚಿತ್ರದಿಂದ ಹೊರಬಂದಿದ್ದಾರೆ.
ಡಾ. ವಿಷ್ಣುವರ್ಧನರ ಯಜಮಾನ ಚಿತ್ರದ ಜನಪ್ರಿಯ ಹಾಡು 'ಪ್ರೇಮ ಚಂದ್ರಮ ಕೈಗೆ ಸಿಗುವನೇ ಹೇಳೆ ತಂಗಾಳಿ' ಹಾಡಿನ ಮೊದಲ ಶಬ್ದಗಳನ್ನು ಹೆಕ್ಕಿ ಪ್ರೇಮ ಚಂದ್ರಮ ಎಂಬ ಮುದ್ದಾದ ಹೆಸರಿನ ಚಿತ್ರದ ಬಗ್ಗೆ ಮೊನ್ನೆಯಷ್ಟೇ ಸುದ್ದಿಯಾಗಿತ್ತು. ಚಿತ್ರ ಇದೇ ಜೂ.18ರಂದು ಮುಹೂರ್ತ ಆಗಿ ಆರಂಭವಾಗಬೇಕಿತ್ತು. ಆದರೆ ಆರಂಭದಲ್ಲೇ ವಿಘ್ನ ಎದುರಾಗಿದೆ.
'ಪ್ರಿನ್ಸ್' ಚಿತ್ರದ ನೆಪ ಒಡ್ಡಿ ನಿಖಿತಾ ಹೊರ ಬಿದ್ದಿದ್ದಾರೆ. ದರ್ಶನ್ ಜೊತೆ ಪ್ರಿನ್ಸ್ ಅವಕಾಶ ದಕ್ಕಿದ್ದೇ ತಡ ನಿಖಿತಾ ಮೆಲ್ಲನೆ ಚಿತ್ರದಿಂದ ಕಾಲ್ಕಿತ್ತಿದ್ದಾರೆ. ಅಷ್ಟರಲ್ಲಿ ಪ್ರೇಮ್ ಹಾಗೂ ನಿರ್ದಶಕರ ನಡುವೆ ಮುನಿಸು ದೊಡ್ಡ ಮನಸ್ತಾಪಕ್ಕೆ ತಿರುಗಿ ಪ್ರೇಮ್ ಕೂಡಾ ಚಿತ್ರಕ್ಕೆ ಗುಡ್ ಬೈ ಹೇಳಿದ್ದಾರೆ.
MOKSHA
ಪ್ರೇಮ್ ಚಿತ್ರ ತಂಡದಿಂದಾಚೆ ಬಂದಿದ್ದು ಒಂದು ಪುಟ್ಟ ಕಾರಣಕ್ಕೆ. ಅವರೇ ಹೇಳುವಂತೆ, ಚಿತ್ರದ ಆಹ್ವಾನ ಪತ್ರಿಕೆಯನ್ನು ಡಿಸೈನ್ ಮಾಡುವ ಜವಾಬ್ದಾರಿಯನ್ನು ತಾನೇ ವಹಿಸಿಕೊಂಡಿದ್ದೆ. ವಿನ್ಯಾಸ ಕೂಡಾ ಮಾಡಿಸಿದ್ದೆ. ಆದರೆ ನನ್ನ ಗಮನಕ್ಕೆ ತರದೇ ಈ ಡಿಸೈನನ್ನು ನಿರ್ಮಾಪಕರು ಹಾಗೂ ನಿರ್ದೇಶಕರು ಬದಲಿಸಿ ಬಿಟ್ಟಿದ್ದರು. ಇದರಿಂದ ಬೇಸರಗೊಂಡ ನಾನು ಆಚೆ ಬಂದು ಬಿಟ್ಟೆ ಎನ್ನುತ್ತಾರೆ.
ಇನ್ನು ಚಿತ್ರದ ನಿರ್ದೇಶಕ ಶಾಹುರಾಜ್ ಶಿಂಧೆ ಹೇಳುವ ಕಥೆಯೇ ಬೇರೆ. ನಾಯಕ ಪ್ರೇಮ್ ಎಲ್ಲಾ ವಿಷಯಕ್ಕೂ ತಲೆ ತೂರಿಸುತ್ತಿದ್ದರು. ನಿಖಿತಾ ಜತೆ ನಟಿಸಲ್ಲಾ ಅಂದರು. ಅದಕ್ಕೆ ನಿಖಿತಾ ಪ್ರಿನ್ಸ್ ಚಿತ್ರದ ಕಾರಣ ಹೇಳಿ ಬೇಸರ ಪಟ್ಟುಕೊಂಡು ಆಚೆ ನಡೆದರು. ನಂತರ ರೇಖರನ್ನು ಹಾಕಿಕೊಳ್ಳಬಹುದೇ ಅಂದರೆ ಅದಕ್ಕೂ ಒಲ್ಲೆ ಎಂದರು. ತೀರಾ ವಿಚಾರಿಸಿದಾಗ ತಾವು ಬಯಸಿದ ನಾಯಕಿಯನ್ನೇ ಆಯ್ಕೆ ಮಾಡಿ ಅನ್ನತೊಡಗಿದರು. ಆಮಂತ್ರಣ ಪತ್ರಿಕೆಯಲ್ಲೂ ತಮ್ಮ ಫೋಟೋ ಮಾತ್ರ ಮುದ್ರಿಸಲು ಅಣಿ ಮಾಡಿದ್ದರು. ಇದ್ಯಾಕೋ ಸರಿಯಿಲ್ಲ ಅನಿಸಿತು. ಅದಕ್ಕೆ ಪ್ರೇಮ್ ಅವರನ್ನೇ ಕೈಬಿಟ್ಟೆ ಎನ್ನುತ್ತಾರೆ.
ಮೊದಲೇ ಪ್ರೇಮ್ ನಟಿಸಿದ ಜೊತೆಗಾರ ಚಿತ್ರ ಹೊರಬರಲು ತಿಣುಕಾಡುತ್ತಿದೆ. ಹೊರಬಂದ ಚಿತ್ರಗಳೆಲ್ಲಾ ಮಕಾಡೆ ಮಲಗಿವೆ. ಅಂಥದ್ದರಲ್ಲಿ ಸಿಕ್ಕ ಅವಕಾಶವನ್ನು ಬೇಕಂತಲೇ ಹೀಗೆ ಕಳೆದುಕೊಂಡರೆ, ಮುಂದೊಂದು ದಿನ ಖಾಲಿ ಕೂರುವ ದಿನ ದೂರವಿಲ್ಲ ಅನ್ನುತ್ತಾರೆ ಗಾಂಧಿನಗರದ ಮಂದಿ.