ಧನುಷ್ ನಿರ್ದೇಶನದ 'ಪ್ರತಿ ಕ್ಷಣ' ಚಿತ್ರದ ಡಬ್ಬಿಂಗ್ ಕಾರ್ಯ ರಾಜಾಜಿನಗರದಲ್ಲಿರುವ ಧರ್ಮ ಅವರ ಸೌಂಡಿಜೈನ್ ಸ್ಟುಡಿಯೋದಲ್ಲಿ ಭರದಿಂದ ಸಾಗಿದೆ. ಇದೇ ಕಟ್ಟಡದಲ್ಲಿರುವ ಸ್ಕೈಲೈನ್ ಸ್ಟುಡಿಯೋದಲ್ಲಿ ಮಾತುಗಳ ಜೋಡಣೆ ನಡೆದಿದ್ದು, ಚಿತ್ರದ ಬಹುತೇಕ ಸಿದ್ಧತೆ ಮುಕ್ತಾಯ ಹಂತ ತಲುಪಿದೆ.
ಇನ್ನು ಒಂದು ದಿನದ ಚಿತ್ರೀಕರಣ ಮುಗಿದರೆ ಚಿತ್ರ ಬಿಡುಗಡೆಗೂ ಸಿದ್ಧ ಎನ್ನುತ್ತಾರೆ. ಇಡೀ ಚಿತ್ರ ಒಂದು ಮದುವೆ ಮನೆಯಲ್ಲಿ ನಡೆದು ಹೋಗುತ್ತದೆ. ಮದುವೆ ಮನೆಯಲ್ಲಿ 24 ಗಂಟೆ ನಡೆಯುವ ಸನ್ನಿವೇಶವೇ ಈ ಪ್ರತಿಕ್ಷಣದ ಮೂಲ ಆಧಾರ. ಶೇ.90ರಷ್ಟು ಚಿತ್ರ ಕಲ್ಯಾಣ ಮಂಟಪದಲ್ಲೇ ಮುಗಿದು ಹೋಗಿದೆ. ಪ್ರೇಮ ಪ್ರಧಾನವಾದ ಚಿತ್ರ ಆಗಿರುವ ಪ್ರತಿಕ್ಷಣದಲ್ಲಿ ಪ್ರೀತಂ ನಾಯಕ ಹಾಗೂ ಸಂಗೀತಾ ಶೆಟ್ಟಿ ನಾಯಕಿಯಾಗಿದ್ದಾರೆ. ಉಳಿದಂತೆ ಚಿತ್ರದಲ್ಲಿ ಬ್ಯಾಂಕ್ ಜನಾರ್ದನ್, ಟೆನಿಸ್ ಕೃಷ್ಣ, ಚಿದಾನಂದ, ಪ್ರತಾಪ್, ಹರೀಶ್ ರಾಯ್ ಮತ್ತಿತರರು ಇದ್ದಾರೆ.
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮಾರ್ಗದರ್ಶನದಲ್ಲಿ ಚೇತನ್ ಪ್ರೊಡಕ್ಷನ್ ಮೂಲಕ ಟಿ.ಎನ್. ಹರೀಶ್ ಕುಮಾರ್ ಈ ಚಿತ್ರ ನಿರ್ಮಿಸುತ್ತಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಗೀತ ರಚನೆ ಎಲ್ಲವೂ ಇವರದ್ದೇ. ಕರುಣೇಶ್ ಛಾಯಾಗ್ರಹಣ, ಇ.ಆರ್. ವಿನಯ್ ಸಂಗೀತ, ಗಂಗಾಧರ್, ಪರಮೇಶ್ ನೃತ್ಯ, ಅಲ್ಟಿಮೆಟ್ ಶಿವು ಸಾಹಸ ಹಾಗೂ ಭರತ್ ನಿರ್ಮಾಣ ನಿರ್ವಹಣೆ ಚಿತ್ರಕ್ಕಿದೆ.