ಪ್ರೀತಿಗೆ ಸಾವಿಲ್ಲ. ಅದೇ ರೀತಿ ಪ್ರೀತಿಗೆ ಸಂಬಂಧಿಸಿದ ಚಿತ್ರಗಳ ಆಗಮನಕ್ಕೂ ಕನ್ನಡ ಚಿತ್ರರಂಗದಲ್ಲಿ ಸಾವಿಲ್ಲ. ಇದರ ಸಾಲಿಗೆ ಹೊಸ ಸೇರ್ಪಡೆ 'ಪ್ರೇಮಾಮೃತ'.
ಜನರಿಗೆ ಹತ್ತಿರವಾದ ಪ್ರೀತಿಯೆಂಬ ವಿಷಯವನ್ನು ಇರಿಸಿಕೊಂಡು ಈ ಚಿತ್ರ ಸೆಟ್ಟೇರುತ್ತಿದೆ. ಎಸ್. ಕೃಷ್ಣಮೂರ್ತಿ ಚಿತ್ರದ ನಿರ್ಮಾಪಕರು. ಭೀಮರಾವ್ ಎಂ. ಕಂಶಿ ನಿರ್ದೇಶಕರು. ಭೀಮರಾವ್ ಇದುವರೆಗೂ ಕೂಡ್ಲು ರಾಮಕೃಷ್ಣ, ಆನಂದ್ ಪಿ. ರಾಜು ಮತ್ತಿತರ ಜತೆ ಸಹಾಯಕರಾಗಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ.
ಚಿತ್ರದ ನಾಯಕ ಚೇತನ್ ಚಂದ್ರ. ಸದ್ಯ ರಾಜಧಾನಿ ಚಿತ್ರವನ್ನು ಪೂರೈಸಿಕೊಟ್ಟಿರುವ ಇವರು ಹೊಸ ಚಿತ್ರವಾದ ಪ್ರೇಮಾಮೃತ ಒಪ್ಪಿಕೊಂಡಿದ್ದಾರೆ. ಚಿತ್ರದ ನಾಯಕಿಯ ಆಯ್ಕೆ ಆಗಿಲ್ಲ. ಕನ್ನಡದವರಿಗೆ ಅವಕಾಶ ನೀಡುತ್ತೇವೆ ಎನ್ನುವುದು ಚಿತ್ರತಂಡ ನೀಡುವ ಭರವಸೆ.
ಚಿತ್ರದಲ್ಲಿ ಸತ್ಯಜಿತ್, ಗುರುರಾಜ್ ಹೊಸಕೋಟೆ, ಪದ್ಮಜಾರಾವ್ ಮತ್ತಿತರರು ಇದ್ದಾರೆ. ಜೂ.18ಕ್ಕೆ ಸೆಟ್ಟೇರುವ ಚಿತ್ರ ಮುಂದಿನ 40 ದಿನ ಸತತ ಚಿತ್ರೀಕರಣಗೊಳ್ಳಲಿದೆ. ಗಣೇಶ್ ಸರವಂದ ಅವರು ಚಿತ್ರಕ್ಕೆ ಸಾಹಿತ್ಯ ಹಾಗೂ ಸಂಗೀತ ನೀಡುತ್ತಿದ್ದಾರೆ. ವೀನಸ್ ಮೂರ್ತಿ ಛಾಯಾಗ್ರಹಣವಿದೆ.