ನಗರದ ಬಿಡದಿ ಸಮೀಪ ಇರುವ ಇನ್ನೊವೆಟಿವ್ ಫಿಲಂ ಸಿಟಿಯಲ್ಲಿ ಏಕಾಏಕಿ ಮಳೆ ಸುರಿಯಲು ಆರಂಭಿಸಿದೆ. ಮುಂಗಾರು ರಾಜ್ಯಕ್ಕೆ ಕಾಲಿರಿಸಿದ ಮಾತ್ರಕ್ಕೆ ಎಲ್ಲೋ ಕೆಲವೆಡೆ ಅಲ್ಪ ಸ್ವಲ್ಪ ಮಳೆಯಾದ ಮಾತ್ರಕ್ಕೆ ಕೇವಲ ಫಿಲಂ ಸಿಟಿಯಲ್ಲಿ ಇಷ್ಟು ಧಾರಾಕಾರವಾಗಿ ಮಳೆ ಸುರಿದಿದ್ದು ಹೇಗೆ ಅಂತೀರಾ...
ವಿಷಯ ತೀರಾ ಸಿಂಪಲ್ ಕಣ್ರೀ. ಅದು ಅಂತಿಂಥ ಮಳೆಯಲ್ಲ, ಕೃತಕ ಮಳೆ. ಆನಂದ್ ಕುಮಾರ್ ನಿರ್ದೇಸಿಸುತ್ತಿರುವ ಪ್ರೈವೇಟ್ ನಂಬರ್ ಚಿತ್ರದ ಶೂಟಿಂಗ್ ನಡೆಯುತ್ತಿತ್ತು. ಇದರ ಸನ್ನಿವೇಶವೊಂದಕ್ಕೆ ಅಗತ್ಯ ಇರುವುದರಿಂದ ಕೃತಕ ಮಳೆ ವ್ಯವಸ್ಥೆ ಕಲ್ಪಿಸಲಾಗಿತ್ತು.
ಹೌದು, ಇನ್ನೊವೇಟಿವ್ ಫಿಲಂ ಸಿಟಿಯಲ್ಲಿ ಪ್ರೈವೇಟ್ ನಂಬರ್ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ. ರಾಂ ನಾರಾಯಣ್ ಬರೆದಿರುವ 'ಮಳೆ ಬಂತು ಮಳೆ ಮೆಲ್ಲನೆ' ಹಾಡಿಗೆ ಲಕ್ಷ್ಮಿ ಅಯ್ಯರ್ ನೃತ್ಯ ನಿರ್ದೇಶನದಲ್ಲಿ ಪ್ರೀತಂ ಹಾಗೂ ನಿಹಾರಿಕಾ ಸಿಂಗ್ ಹೆಜ್ಜೆ ಹಾಕಿದರು. ಇದರ ಚಿತ್ರೀಕರಣ ಅಲ್ಲಿ ನಡೆಯಿತು.
ಕೆ.ಕೆ. ಕಾಂತರಾಜ್ ಕನ್ನಲ್ ರಚನೆಯ 'ಜಾನಿವಾಕರ್ ಸೈಟ್ನಲ್ಲಿ ಬಿಂದಾಸ್...' ಹಾಗೂ ಫುಲ್ ಮೂಡಿನಲ್ಲಿ 'ಸೈಲೆನ್ಸು ಬೇಡ ಸೈಲೆನ್ಸು ಬೇಡ...' ಹಾಡುಗಳ ಚಿತ್ರೀಕರಣವೂ ನಡೆಯಿತು. ಇಮ್ರಾನ್ ನೃತ್ಯ ಸಂಯೋಜಿಸಿರುವ ಈ ಗೀತೆಗೆ ಪ್ರೀತಂ ಹಾಗೂ ನಿಹಾರಿಕಾ ಸಿಂಗ್ ಜತೆ ಕ್ಲಾಡಿಯಾ, ಶರಣ್, ಚಿದಾನಂದ, ಶ್ರೀಲಕ್ಷ್ಮಿ ಮುಂತಾದವರು ಪಾಲ್ಗೊಂಡಿದ್ದರು. ಎಂ.ಕೆ. ಸಿನಿ ಪ್ರೊಡಕ್ಷನ್ ಅಡಿ ಗಣೇಶ್ ಶೆಟ್ಟಿ ನಿರ್ಮಿಸುತ್ತಿರುವ ಈ ಚಿತ್ರ ಸಾಕಷ್ಟು ನಿರೀಕ್ಷೆ ಹೊತ್ತಿದೆ. ಯಶ ಸಿಗಲಿ ಎಂದು ಆಶಿಸೋಣ.