ಆರ್.ಎಸ್. ಪ್ರೊಡಕ್ಷನ್ಸ್ ಲಾಂಛನದಡಿ ಚಿತ್ರೀಕರಣಗೊಳ್ಳುತ್ತಿರುವ ಶಿವರಾಜ್ ಕುಮಾರ್ ಅಭಿನಯದ ಚಿತ್ರ ಮೈಲಾರಿ ಚಿತ್ರೀಕರಣ ಸಂದರ್ಭದಲ್ಲೇ ಸಾಕಷ್ಟು ಸುದ್ದಿಯಾಗುತ್ತಿದೆ. ಆ ಮೂಲಕ ರಾಜ್ ಕುಡಿ ಶಿವಣ್ಣ ಕೂಡಾ ಸಾಕಷ್ಟು ಸುದ್ದಿ ಮಾಡುತ್ತಲೇ ಇದ್ದಾರೆ.
ಕಾಲೇಜು ಹುಡುಗನ ಪಾತ್ರ ನಿರ್ವಹಿಸುವ ಸಲುವಾಗಿ ಸುಮಾರು 8 ಕೆ.ಜಿ. ತೂಕ ಕಡಿಮೆ ಮಾಡಿಕೊಂಡಿರುವ ಶಿವರಾಜ್ ಕುಮಾರ್ ಕಾಲೇಜು ಹುಡುಗರೂ ನಾಚುವ ಮೈಕಟ್ಟನ್ನು ತಮ್ಮ 49ರ ಹರೆಯದಲ್ಲಿ ರೂಢಿಸಿಕೊಂಡಿದ್ದಾರಂತೆ. ಚಿತ್ರದ ಚಿತ್ರೀಕರಣ ವೀಕ್ಷಿಸುತ್ತಿರುವ ಪ್ರತಿಯೊಬ್ಬರೂ ಇದೇ ಮಾತನ್ನು ಆಡುತ್ತಿದ್ದಾರೆ.
ಬಹು ನಿರೀಕ್ಷೆಯ ಈ ಚಿತ್ರವನ್ನು ಕೆ.ಪಿ. ಶ್ರೀಕಾಂತ್ ನಿರ್ಮಿಸುತ್ತಿದ್ದಾರೆ. ಸದ್ಯ ಈ ಚಿತ್ರ ಮೈಸೂರಿನಲ್ಲಿ ಚಿತ್ರೀಕರಣಗೊಳ್ಳುತ್ತಿದೆ. ಮೈಸೂರಿನ ತಂಪು ವಾತಾವರಣದಲ್ಲಿ ನಾಯಕ ನಾಯಕಿಯ ಪ್ರೇಮ ಸಲ್ಲಾಪದ ಸನ್ನಿವೇಶಗಳು ಚಿತ್ರೀಕರಣಗೊಳ್ಳುತ್ತಿವೆ. ಇದರಲ್ಲಿ ಶಿವರಾಜ್ ಕುಮಾರ್ ಹಾಗೂ ಸದಾ ಪಾಲ್ಗೊಂಡಿದ್ದಾರೆ.
ತಾಜಮಹಲ್ ಹಾಗೂ ಪ್ರೇಮ್ ಕಹಾನಿ ನಂತರ ಆರ್. ಚಂದ್ರು ಈ ಚಿತ್ರ ನಿರ್ದೇಶಿಸುತ್ತಿದ್ದಾರೆ. ವಿಭಿನ್ನ ಕಥೆಯನ್ನು ಚಿತ್ರ ಹೊಂದಿದ್ದು, ಎಲ್ಲರ ಗಮನ ಸೆಳೆಯುವಲ್ಲಿ ಸಂಶಯವಿಲ್ಲ ಎನ್ನಲಾಗುತ್ತಿದೆ. ಚಿತ್ರಕ್ಕೆ ಗುರುಕಿರಣ್ ಸಂಗೀತ ನೀಡಿದ್ದಾರೆ. ಕೆ.ಎಸ್. ಚಂದ್ರಶೇಖರ್ ಛಾಯಾಗ್ರಹಣವಿದೆ. ಕೆ.ಎಂ. ಪ್ರಕಾಶ್ ಸಂಕಲನ, ಶಿವಕುಮಾರ್ ಕಲಾ ನಿರ್ದೇಶನವಿದೆ. ಒಟ್ಟಾರೆ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದ್ದು, ಸಾಕಷ್ಟು ಕುತೂಹಲ ಇರಿಸಿಕೊಂಡು ಶೀಘ್ರವೇ ತೆರೆಗೆ ಬರಲಿದೆ.