ಪ್ರೇಮ ಚಂದ್ರಮ ಚಿತ್ರದ ನಾಯಕ ನಾಯಕಿ ಸಮಸ್ಯೆ ಕೊನೆಗೂ ಬಗೆಹರಿದಿದೆ. ಇದರರ್ಥ, ಕೊನೆಗೂ ಪ್ರೇಮ್ ಅವರೇ ಚಿತ್ರದ ನಾಯಕರಾಗಿದ್ದಾರೆ ಅಂತ ಖಂಡಿತಾ ಅಲ್ಲ. ಬದಲಾಗಿ ಪ್ರೇಮ್ ಮಾತ್ರ ಇನ್ನೂ ಇಕ್ಕಟ್ಟಿಗೆ ಸಿಲುಕಿದ್ದಾರೆ. ಆದರೆ, ಅವರನ್ನು ಚಿತ್ರತಂಡ ಹೊರಹಾಕಿದ್ದೇ ತಡ, ಆ ಜಾಗಕ್ಕೆ ನಾಯಕನಾಗಿ ಸವಾರಿ ಚಿತ್ರದ ಖ್ಯಾತಿಯ ರಘು ಮುಖರ್ಜಿ ಅವರನ್ನು ಆಯ್ಕೆಯನ್ನೂ ಮಾಡಲಾಗಿದೆ. ನಾಯಕಿ ನಿಖಿತಾ ಜಾಗಕ್ಕೆ ರೇಖಾ ದಾಪುಗಾಲಿಟ್ಟಿದ್ದಾರೆ. ಇಷ್ಟೇ ಅಲ್ಲ, ಪ್ರೇಮ್ ವಿರುದ್ಧ ನಿರ್ದೇಶಕ ಶಾಹುರಾಜ್ ಶಿಂಧೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರನ್ನೂ ನೀಡಿದ್ದಾರೆ!
ಶಾಹುರಾಜ್ ಶಿಂಧೆ ನಿರ್ದೇಶನದ ಪ್ರೇಮ ಚಂದ್ರಮ ಎಂಬ ತಮ್ಮ ಚಿತ್ರಕ್ಕೆ ಪ್ರೇಮ್ ಹಾಗೂ ನಿಖಿತಾರನ್ನು ಆಯ್ಕೆ ಮಾಡಿದ್ದರು. ಆದರೆ ನಿಖಿತಾ ತನಗೆ ದರ್ಶನ್ ಅಭಿನಯದ ಪ್ರಿನ್ಸ್ ಚಿತ್ರದಲ್ಲಿ ಅವಕಾಶ ದಕ್ಕಿರೋದ್ರಿಂದ ಡೇಟ್ಸ್ ಸಮಸ್ಯೆಯಾಗುತ್ತೆ ಅಂತ್ನನುತ್ತಾ ಕಾಲ್ಕಿತ್ತಿದ್ದರು. ಆದರೆ ಆಕೆ ಚಿತ್ರಕ್ಕೆ ಕೈಕೊಡಲು ಕಾರಣ ಬೇರೆಯೇ ಇದೆ ಎಂಬುದು ಗಾಂಧಿನಗರದ ಗುಸುಗುಸು. ಪ್ರೇಮ್ ನಿಖಿತಾ ಜೊತೆ ನಟಿಸಲ್ಲ, ತಾನು ಹೇಳಿದ ನಟಿಯನ್ನೇ ಆಯ್ಕೆ ಮಾಡಿ ಎಂದು ನಿರ್ದೇಶಕರಿಗೆ ಗಂಟು ಬಿದ್ದಿದ್ದೇ ಈ ಎಲ್ಲಾ ಅವಾಂತರಕ್ಕೆ ಕಾರಣ ಎನ್ನಲಾಗಿದೆ.
ಆದರೆ, ಇವೆಲ್ಲವನ್ನೂ ಪ್ರೇಮ್ ಮಾತ್ರ ಅಲ್ಲಗಳೆದಿದ್ದಾರೆ. ನಾನು ಈ ಪ್ರೇಮ ಚಂದ್ರಮ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಹೊಂದಿದ್ದೆ. ಆದರೆ ನಿರ್ದೇಶಕರು ಮಾತ್ರ ಈಗ ನನ್ನ ಮೇಲೆ ಸಲ್ಲದ ಅಪವಾದ ಹೊರಿಸುತ್ತಿದ್ದಾರೆ. ನಾನು ನಿಖಿತಾ ಜೊತೆಗೆ ನಟಿಸಲ್ಲ ಅಂತ ಹೇಳಿಯೇ ಇಲ್ಲ. ಚಿತ್ರದ ಮುಹೂರ್ತದ ಆಮಂತ್ರಣ ಪತ್ರಿಕೆಯನ್ನು ನಾನೇ ಡಿಸೈನ್ ಮಾಡುತ್ತೇನೆಂದು ಮಾಡಿ ಕೊಟ್ಟಿದ್ದೆ. ಆದರವರು ಅದನ್ನು ಚೇಂಜ್ ಮಾಡಿದ್ದರು. ಇದಷ್ಟೇ ಈ ಎಲ್ಲಾ ಅವಾಂತರಕ್ಕೆ ಕಾರಣ ಎನ್ನುತ್ತಾರೆ ಪ್ರೇಮ್.
ಅದೇನೇ ಇರಲಿ. ಒಟ್ಟಾರೆ ಪ್ರೇಮ್ ಇದೀಗ ಪ್ರೇಮ ಚಂದ್ರಮ ಚಿತ್ರದಿಂದ ಹೊರಬೀಳುವ ಮೂಲಕ ಅವಕಾಶ ವಂಚಿತರಾಗಿದ್ದಾರೆ. ಅವರ ಜಾಗಕ್ಕೆ ರಘು ಮುಖರ್ಜಿ ಎಂಬ ಮತ್ತೊಬ್ಬ ಸ್ಪುರದ್ರೂಪಿ ನಟ ಬಂದಿದ್ದಾರೆ. ನಾಯಕಿಯ ಸ್ಥಾನವನ್ನು ರೇಖಾ ತುಂಬಿದ್ದಾರೆ. ಚಿತ್ರವಂತೂ ಜೂ.18ರಂದು ಸೆಟ್ಟೇರಲಿದ್ದಾರೆ. ಪಾಪ ಪ್ರೇಮ್, ಸಿಕಿದ ಒಂದೇ ಒಂದು ಅವಕಾಶವನ್ನೂ ಕಳೆದುಕೊಂಡಿದ್ದಾರೆ.